- ಹೊಸಕೋಟೆ ಸಮೀಪದ ಡಿ ಹೊಸಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಘಟನೆ
- ಗ್ರಾಮದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸ್ ಸಿಬ್ಬಂದಿ ನೇಮಕ
ಚುನಾವಣೆ ಗೆದ್ದ ಸಂಭ್ರಮಾಚರಣೆ ವೇಳೆ, ಘರ್ಷಣೆಗೆ ಇಳಿದು ಸ್ವಂತ ಚಿಕ್ಕಪ್ಪನ್ನನ್ನೇ 21 ವರ್ಷದ ಯುವಕ ಕೊಲೆ ಮಾಡಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ಡಿ ಹೊಸಹಳ್ಳಿ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ. ಯುವಕನನ್ನು ನಂದಗುಡಿ ಪೊಲೀಸರು ಬಂಧಿಸಿದ್ದಾರೆ.
ಜಿ ಆದಿತ್ಯ ಬಂಧಿತ. ಬಂಧಿತ ಯುವಕ ತನ್ನ ತಂದೆ ಗಣೇಶ್‌ನೊಂದಿಗೆ ಗೆಲುವು ಕಂಡ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪಟಾಕಿ ಸಿಡಿಸುತ್ತಿದ್ದ ಗುಂಪಿನೊಂದಿಗೆ ಇವರು ಸೇರಿ ಸಂಭ್ರಮಾಚರಣೆ ಮಾಡುತ್ತಿದ್ದರು. ಮೃತ ವ್ಯಕ್ತಿ ಕೃಷ್ಣಪ್ಪ ಅವರ ಮನೆಯ ಎದುರು ಪಟಾಕಿ ಸಿಡಿಸುತ್ತಿದ್ದ ಹಿನ್ನೆಲೆ, ಇವರ ಮನೆಯವರು ವಿರೋಧಿಸಿದ್ದಾರೆ. ಈ ವೇಳೆ, ಗಣೇಶ್ ಹಾಗೂ ಕೃಷ್ಣಪ್ಪ ಅವರ ನಡುವೆ ಗಲಾಟೆ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಬಂಧಿತ ಆದಿತ್ಯ ಕೊಡಲಿಯನ್ನು ತಂದು ಕೃಷ್ಣಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ, ಕೃಷ್ಣಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಲಾಟೆಯಲ್ಲಿ ಪತ್ನಿ ಗಂಗಮ್ಮ ಮತ್ತು ಮಗ ಬಾಬು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ನಂತರ ಬಂಧಿತನ ತಂದೆ ಗಣೇಶ್ ಮತ್ತು ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಗ್ರಾಮದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ಜಿಲ್ಲಾ ಪೊಲೀಸರು ಸಿಬ್ಬಂದಿ ನಿಯೋಜಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೊಟ್ಟೆಯಲ್ಲಿಟ್ಟುಕೊಂಡು ₹11 ಕೋಟಿ ಮೌಲ್ಯದ ಕೊಕೇನ್ ಕ್ಯಾಪ್ಸೂಲ್ ಸಾಗಿಸುತ್ತಿದ್ದ ನೈಜೀರಿಯನ್ ಬಂಧನ
ಆದಿತ್ಯನನ್ನು ಬಂಧಿಸಲಾಗಿದೆ. ಗಣೇಶ್ ಮತ್ತು ಇತರರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಈ ನಡುವೆ ಬಿಜೆಪಿ ಬೆಂಬಲಿಗರು ಕೃಷ್ಣಪ್ಪ ಅವರ ಶವವನ್ನು ನಂದಗುಡಿ ಠಾಣೆಗೆ ಕೊಂಡೊಯ್ದು ಭಾನುವಾರ ಪ್ರತಿಭಟನೆ ನಡೆಸಿದರು. ಆರೋಪಿಗಳನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.