- ಕೈ ಮೇಲೆ ಭೀಮೇಶ್ ಎಂಬ ಹೆಸರು, ಆತನ ಮೊಬೈಲ್ ನಂಬರ್ ಬರೆದುಕೊಂಡಿದ್ದ ವಿದ್ಯಾರ್ಥಿನಿ
- ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭಿಸಿದ ಪೊಲೀಸರು
ಜೀವನದ ಮೇಲೆ ಜಿಗುಪ್ಸೆ ಬಂದಿದೆ ಎಂದು ಡೆತ್‌ನೋಟ್ ಬರೆದಿಟ್ಟು ಬಿಎಸ್ಸಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಬಲಿಯಾಗಿರುವ ಘಟನೆ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಆಯಿಶಾ ಬಿ.ಆರ್ ಮೃತ ವಿದ್ಯಾರ್ಥಿನಿ. ಏ.30ರ ಬೆಳಗ್ಗೆ ಬಿನ್ನಿಮಿಲ್ ಸಮೀಪದ ಪೊಲೀಸ್ ಕ್ವಾರ್ಟರ್ಸ್ನಲ್ಲಿರುವ ಕಟ್ಟಡದ ಏಳನೇ ಮಹಡಿಯಿಂದ ಹಾರಿ, ಆತ್ಮಹತ್ಯೆಗೆ ಬಲಿಯಾಗಿದ್ದಾಳೆ.
ಮೃತ ವಿದ್ಯಾರ್ಥಿನಿ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಳು. ಆತ್ಮಹತ್ಯೆಗೂ ಮುನ್ನ ಆಕೆ ತನ್ನ ಕೈ ಮೇಲೆ ಭೀಮೇಶ್ ಎನ್ನುವ ಹೆಸರು ಮತ್ತು ಆತನ ಮೊಬೈಲ್ ನಂಬರ್ ಕೂಡ ಬರೆದುಕೊಂಡಿದ್ದಾಳೆ.
ವಿದ್ಯಾರ್ಥಿನಿ ಆಯಿಶಾ ಮೂಲತಃ ಬಳ್ಳಾರಿ ಮೂಲದವಳು. ಕಳೆದ ಮೂರು ವರ್ಷಗಳ ಹಿಂದೆ ಸಿಐಡಿನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿದ್ದ ಭೀಮೇಶ್ ನಾಯಕ್ ಎಂಬುವವರ ಪರಿಚಯವಾಗಿತ್ತು. ಈ ಪರಿಚಯ ಪ್ರೇಮಕ್ಕೆ ತಿರುಗಿ ನಂತರದಲ್ಲಿ ಮನಸ್ತಾಪ ಕೂಡಾ ಉಂಟಾಗಿತ್ತು. ಈ ಹಿನ್ನೆಲೆ, ಆಯಿಶಾ ಭೀಮೇಶ್ ನಾಯಕ್‌ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಳು ಎಂದು ತಿಳಿದುಬಂದಿದೆ.
ಆಯಿಶಾ ದೂರು ದಾಖಲಿಸಿದ ಹಿನ್ನೆಲೆ, ಭೀಮೇಶ್ ನಾಯಕ ಫೋಕ್ಸೋ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ ಹೊರಗೆ ಬಂದಿದ್ದನು. ಈತ ಜೈಲುವಾಸ ಅನುಭವಿಸಿದ ನಂತರ ಆಯಿಶಾ ಆಗಾಗ್ಗೆ ಭೀಮೇಶ್‌ನನ್ನು ಭೇಟಿ ಮಾಡಲು ಬೆಂಗಳೂರಿಗೆ ಬರುತ್ತಿದ್ದಳು ಎನ್ನಲಾಗಿದೆ.
ಎಂದಿನಂತೆ ಏ.24ರಂದು ಬೆಂಗಳೂರಿಗೆ ಬಂದಿದ್ದ ಆಯಿಶಾ ಭೀಮೇಶ್ ನಾಯಕ ಜತೆಯಲ್ಲಿ ಕ್ವಾಟ್ರಾಸ್ ಮನೆಯಲ್ಲಿ ಉಳಿದುಕೊಂಡಿದ್ದಳು. ಏ.30ರ ಬೆಳಿಗ್ಗೆ 8.30ಕ್ಕೆ ಭೀಮೇಶ್ ಊರಿಗೆ ತೆರಳಿದ್ದರು. ಮನೆಯಲ್ಲಿ ಒಬ್ಬಳೇ ಇದ್ದ ಆಯಿಶಾ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮನೆಯಿಂದ ಮತದಾನ: ಮತ ಚಲಾವಣೆಗೂ ಮುನ್ನವೇ 33 ಮಂದಿ ಸಾವು
ಆಯಿಶಾ ಬರೆದ ಡೆತ್‌ನೋಟ್‌ನಲ್ಲೇನಿದೆ?
“ನನ್ನ ಸಾವಿಗೆ ಯಾರು ಕಾರಣರಲ್ಲ. ನನಗೆ ಜೀವನದ ಮೇಲೆ ಜಿಗುಪ್ಸೆ ಬಂದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಭೀಮೇಶ್ ಅವರ ಮೇಲೆ ನಾನು ಸುಳ್ಳು ದೂರು ನೀಡಿದ್ದೆ, ಇದರಿಂದ ನಾನು ತುಂಬಾ ಪಶ್ಚಾತಾಪ ಪಟ್ಟಿದ್ದೇನೆ. ಭೀಮೇಶ್ ತುಂಬಾ ಒಳ್ಳೆಯವರು, ಅವರು ಸೂಕ್ಷ್ಮ ಹಾಗೂ ಮುಗ್ಧ ವ್ಯಕ್ತಿ. ನನ್ನ ಸುಳ್ಳು ದೂರಿನಿಂದ ಭೀಮೇಶ್ ಅವರ ತಂದೆ ಅನಾರೋಗ್ಯಕ್ಕಿಡಾಗಿದ್ದಾರೆ. ಭೀಮೇಶ್ ನಾಯಕ್ ನನ್ನ ಆಪ್ತ ಸ್ನೇಹಿತ. ನನಗೂ ಅವರಿಗೂ ಯಾವುದೇ ದೈಹಿಕ ಸಂಪರ್ಕವಿರಲಿಲ್ಲ, ನನ್ನಿಂದ ನಮ್ಮ ಕುಟುಂಬ ಮತ್ತು ಭೀಮೇಶ್ ಅವರ ಕುಟುಂಬಕ್ಕೆ ತುಂಬಾ ನೋವಾಗಿದೆ. ಈ ಪಶ್ಚಾತಾಪದಿಂದ ಹೊರಬರಲು ಆಗುತ್ತಿಲ್ಲ. ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ನನ್ನ ಆತ್ಮಹತ್ಯೆಗೂ ಭೀಮೇಶ್ ಅವರಿಗೂ ಯಾವುದೇ ಸಂಬಂಧವಿಲ್ಲ” ಎಂದು ಬರೆದಿದ್ದಾರೆ.
ಈ ಡೆತ್ನೋಟ್ನಲ್ಲಿ ಆಯಿಶಾ ಏ.24ರ ದಿನಾಂಕ ನಮೂದಿಸಿದ್ದಾಳೆ. ಬೆಂಗಳೂರಿಗೆ ಬರುವ ಹೊತ್ತಿನಲ್ಲೇ ಆಕೆ ಸಾಯುವ ನಿರ್ಧಾರ ಮಾಡಿದ್ದಳಾ? ಎಂಬ ಪ್ರಶ್ನೆ ಮೂಡಿದೆ. ಸದ್ಯ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.