- ಚುನಾವಣಾ ಪ್ರಕ್ರಿಯೆಯಿಂದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರನ್ನು ಅನರ್ಹಕ್ಕೆ ಆಗ್ರಹ
- ಜನಪ್ರತಿನಿಧಿಗಳ ಕಾಯಿದೆ 1951ರ ಉಲ್ಲಂಘನೆಯಾಗುತ್ತಿದೆ ಎಂದು ಎಎಪಿ ಆರೋಪ
ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಹಣ ವರ್ಗಾವಣೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ನೇತೃತ್ವದ ನಿಯೋಗವು ಬುಧವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಸತೀಶ್, “ರಾಜಾಜಿನಗರದಲ್ಲಿ ಚುನಾವಣಾ ಅಕ್ರಮ ಅವ್ಯಾಹತವಾಗಿ ನಡೆಯುತ್ತಿದೆ. ಮತದಾನದ ದಿನ ಸಮೀಪಿಸುತ್ತಿದ್ದಂತೆ, ಭಾರೀ ಪ್ರಮಾಣದ ಹಣವು ಅಕ್ರಮ ವರ್ಗಾವಣೆಯಾಗುತ್ತಿದೆ. ಚುನಾವಣಾ ನೀತಿ ಸಂಹಿತೆ ಕಾಯಿದೆ 1961, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ, ಜನಪ್ರತಿನಿಧಿಗಳ ಕಾಯಿದೆ 1951 ಮುಂತಾದ ಅನೇಕ ಕಾನೂನು ಉಲ್ಲಂಘನೆಯಾಗುತ್ತಿದೆ. ಜಾರಿ ನಿರ್ದೇಶನಾಲಯವು ಶೀಘ್ರವೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮತದಾನ ಮಾಡಲು ಆಮಿಷ ಬಂದರೆ ‘ಸಿ-ವಿಜಿಲ್’ ತಂತ್ರಾಂಶದಲ್ಲಿ ದೂರು ದಾಖಲಿಸಿ: ತುಷಾರ್ ಗಿರಿನಾಥ್
“ರಾಜಾಜಿನಗರದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ, ಮಾಜಿ ಉಪಮೇಯರ್ ರಂಗಣ್ಣ ರಘುವೀರ್, ಪದ್ಮರಾಜ್, ವಿಜಯಕುಮಾರ್, ಕೃಷ್ಣಮೂರ್ತಿ, ಯಶಸ್, ರವಿ, ಗಿಳಿ ವೆಂಕಟೇಶ್, ಮುನಿರಾಜ್, ಪಳನಿಕಾಂತ್, ರಾಜಣ್ಣ ವಿರುದ್ಧ ದೂರು ನೀಡಲಾಗಿದೆ. ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ, ಜಂಟಿ ಮುಖ್ಯ ಚುನಾವಣಾಧಿಕಾರಿ ಮತ್ತು ರಾಜಾಜಿನಗರದ ಆರ್‌ಒಗೆ ದೂರು ಸಲ್ಲಿಸಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಚುನಾವಣಾ ಪ್ರಕ್ರಿಯೆಯಿಂದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣರವರನ್ನು ಅನರ್ಹ ಮಾಡಬೇಕೆಂದು ಆಗ್ರಹಿಸಿದ್ದೇವೆ” ಎಂದು ಡಾ. ಸತೀಶ್ ತಿಳಿಸಿದರು.