- ಗಣತಿಗೆ 50 ತಂಡ ರಚನೆ, ಪ್ರತಿ ತಂಡದಲ್ಲಿ 2 ಸದಸ್ಯರು
- ಬೆಳಗ್ಗೆ 6ರಿಂದ 10ರವರೆಗೆ ಬೆಂಗಳೂರಿನಲ್ಲಿ ನಾಯಿಗಳ ಗಣತಿ
ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನಲ್ಲಿರುವ ಬೀದಿನಾಯಿ ಗಣತಿ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ. ಜೂನ್ ಅಂತ್ಯದೊಳಗೆ ಗಣತಿ ಪ್ರಾರಂಭವಾಗಲಿದೆ.
2019ರಲ್ಲಿ ಬಿಬಿಎಂಪಿ ನಗರದಲ್ಲಿ ಬೀದಿನಾಯಿಗಳ ಸಮೀಕ್ಷೆ ಮಾಡಿ, ಮೂರು ಲಕ್ಷ ಬೀದಿನಾಯಿಗಳನ್ನು ಗುರುತಿಸಿತ್ತು. ಈ ಗಣತಿಯಿಂದ ನಗರದಲ್ಲಿರುವ ನಾಯಿಗಳ ಸಂಖ್ಯೆಯ ಬಗ್ಗೆ ಖಚಿತ ಮಾಹಿತಿ ದೊರೆಯುತ್ತದೆ. ಬಿಬಿಎಂಪಿಯ ಲಸಿಕೆ ಮತ್ತು ಸಂತಾನಶಕ್ತಿ ಹರಣ ಕಾರ್ಯಕ್ರಮಗಳು ನಾಯಿಗಳ ಸಂಖ್ಯೆ ಕಡಿಮೆ ಮಾಡಲು ಸಹಾಯ ಮಾಡಿದೆಯೇ ಎಂಬ ಬಗ್ಗೆ ತಿಳಿಯಬಹುದು.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಬಿಬಿಎಂಪಿ ಜಂಟಿ ನಿರ್ದೇಶಕ (ಪಶುಸಂಗೋಪನೆ) ಡಾ ಕೆ ಪಿ ರವಿಕುಮಾರ್, “ಬೀದಿ ನಾಯಿಗಳ ಗಣತಿ ನಡೆಸಲು ಬಿಬಿಎಂಪಿ ಹಾಗೂ ಪಶುಸಂಗೋಪನಾ ಇಲಾಖೆಯಿಂದ ತಲಾ ಅರ್ಧದಷ್ಟು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಒಟ್ಟು 50 ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿಯೂ ಇಬ್ಬರು ಸದಸ್ಯರಿರುತ್ತಾರೆ. ಈ ಪೈಕಿ ಒಬ್ಬರು ವಾಹನ ಚಾಲನೆ ಮಾಡುತ್ತಾರೆ. ಇನ್ನೊಬ್ಬರು ನಾಯಿಗಳ ಡೇಟಾವನ್ನು ಗುರುತಿಸಿ ಅಪಲೋಡ್ ಮಾಡುತ್ತಾರೆ” ಎಂದರು.
“ಕಿವಿಯ ಕ್ಲಿಪಿಂಗ್ ಆಧರಿಸಿ ನಾಯಿಯ ಲಿಂಗ ಮತ್ತು ಸಂತಾನಶಕ್ತಿ ಹರಣಗೊಳಿಸಲಾಗಿದೆಯೇ ಎಂಬ ಬಗ್ಗೆ ತಿಳಿದುಕೊಳ್ಳಲಾಗುತ್ತದೆ. ಪ್ರತಿ ನಾಯಿಯ ಜಿಯೋಟ್ಯಾಗ್ ಮಾಡಲಾದ ಚಿತ್ರವನ್ನು ಅಪ್ಲಿಕೇಶನ್‌ಗೆ ಅಪಲೋಡ್ ಮಾಡಲಾಗುತ್ತದೆ” ಎಂದು ಹೇಳಿದರು.
“ರಚಿಸಿದ 50 ತಂಡಗಳು ಪ್ರತಿ ದಿನ 5 ಕಿ.ಮೀ ಸಂಚಾರ ಮಾಡುತ್ತವೆ. ಬೆಳಗ್ಗೆ 6ರಿಂದ 10ರವರೆಗೆ ನಾಯಿಗಳ ಗಣತಿ ಮಾಡಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ನಾಯಿಗಳು ಹೆಚ್ಚಾಗಿ ಕಡಿಮೆ ಚಟುವಟಿಕೆಗಳಿಂದ ಕೂಡಿರುತ್ತವೆ ಹಾಗೂ ಸುಲಭವಾಗಿ ಕಾಣಸಿಗುತ್ತವೆ. ಯಾವ ತಂಡ ಯಾವ ಪ್ರದೇಶಕ್ಕೆ ತೆರಳಬೇಕು ಎಂಬ ಬಗ್ಗೆ ಮ್ಯಾಪ್ ಮಾಡಲಾಗಿದೆ. ನಾಯಿಗಳ ಗಣತಿ ಮತ್ತು ಇನ್ನಿತರ ಅಂಶಗಳ ಬಗ್ಗೆ ಮಾಹಿತಿ ದಾಖಲು ಮಾಡಲು ಆಯಾ ತಂಡಕ್ಕೆ ನಿಗದಿ ಮಾಡಿದ ಸ್ಥಳಕ್ಕೆ ಎರಡು ದಿನ ತೆರಳುತ್ತಾರೆ” ಎಂದರು.
“ತಂಡಕ್ಕೆ ನೀಡಿದ ಗಣತಿ ಕೆಲಸ ಮುಗಿದ ಆರು ದಿನಗಳ ಬಳಿಕ ಇಲಾಖೆಯ ಅಧಿಕಾರಿಗಳು ಜನಸಂಖ್ಯೆಯನ್ನು ದೃಢೀಕರಿಸಲು ಅದೇ ಸ್ಥಳಗಳಿಗೆ ತೆರಳುತ್ತಾರೆ. ಈ ಗಣತಿ ಸಂಪೂರ್ಣವಾಗಿ ಮುಗಿಯಲು 15 ದಿನಗಳ ಕಾಲಾವಕಾಶ ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆಯಿದೆ. ತಂಡ ಹಾಗೂ ಇಲಾಖೆಯ ಅಧಿಕಾರಿಗಳು ನೀಡಿದ ಡೇಟಾವನ್ನು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್)ಗೆ ಕಳುಹಿಸಲಾಗುತ್ತದೆ. ಅಲ್ಲಿ ಅದನ್ನು ವಿಶ್ಲೇಷಿಸಲಾಗುತ್ತದೆ. 2019ರಲ್ಲಿ ಮಾಡಿದಂತೆ ಅಂತಿಮ ಜನಸಂಖ್ಯೆಯ ಅಂದಾಜುಗಳನ್ನು ನೀಡಲಾಗುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕ್ಷುಲ್ಲಕ ಕಾರಣಕ್ಕೆ ಬಾರ್‌ನಲ್ಲಿ ಕಿತ್ತಾಡಿಕೊಂಡ ಕಿರುತೆರೆ ನಟನ ವಿರುದ್ಧ ಎಫ್‌ಐಆರ್ ದಾಖಲು
ಬೀದಿ ನಾಯಿಗಳ ಗಣತಿಯ ದತ್ತಾಂಶದ ಆಧಾರದ ಮೇಲೆ 100 ನಾಯಿಗಳಿಗೆ ಮೈಕ್ರೋಚಿಪ್‌ಗಳನ್ನು ಅಳವಡಿಸಲು ಬಿಬಿಎಂಪಿ ಪಶುಸಂಗೋಪನಾ ಇಲಾಖೆ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಿದೆ.
ನಾಯಿಯ ಕತ್ತಿಗೆ ಮೈಕ್ರೋಚಿಪ್ ಹಾಕಿದರೆ, ಮೈಕ್ರೋಚಿಪ್ ಅನ್ನು ಸ್ಕ್ಯಾನ್ ಮಾಡಿದಾಗ ನಾಯಿಯ ಲಸಿಕೆ ಮತ್ತು ಸಂತಾನಶಕ್ತಿ ಹರಣದಂತಹ ವಿವರಗಳು ಲಭ್ಯವಾಗುತ್ತವೆ. ಒಂದು ವೇಳೆ, ಬಿಬಿಎಂಪಿಯ ವಾರ್ಷಿಕ ಲಸಿಕೆ ಕಾರ್ಯಕ್ರಮದಿಂದ ಹೆಚ್ಚಿನ ನಾಯಿಗಳು ತಪ್ಪಿಸಿಕೊಂಡಿದ್ದರೆ, ಅಥವಾ ಕೆಲವು ನಾಯಿಗಳು ಒಂದಕ್ಕಿಂತ ಹೆಚ್ಚು ಬಾರಿ ಲಸಿಕೆ ಹಾಕಿಸಿಕೊಂಡರೇ ಈ ಬಗ್ಗೆ ಮೈಕ್ರೋಚಿಪ್ ಸಂಪೂರ್ಣ ಮಾಹಿತಿ ನೀಡುತ್ತದೆ.