- ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
- ಅಮೃತವರ್ಷಿಣಿ, ಅಣ್ಣ ತಂಗಿ ಧಾರಾವಾಹಿಗಳಲ್ಲಿ ನಟಿಸಿದ್ದ ಪ್ರಜ್ವಲ್
ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ಹೆಸರು ಮಾಡಿದ್ದ ಕಿರುತೆರೆ ನಟ ಪ್ರಜ್ವಲ್ ಬಾರ್‌ನಲ್ಲಿ ಓರ್ವನ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದೀಗ ನಟನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಹಲ್ಲೆಗೊಳಗಾದ ವ್ಯಕ್ತಿ ಚೇತನ್ ಎಂಬುವವರು ನೀಡಿದ ದೂರಿನ ಆಧಾರದ ಮೇರೆಗೆ ನಟನ ವಿರುದ್ಧ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಜ್ವಲ್ ಅಮೃತವರ್ಷಿಣಿ ಮತ್ತು ಅಣ್ಣ ತಂಗಿ ಕನ್ನಡ ಧಾರಾವಾಹಿಗಳಲ್ಲಿ ನಟಿಸಿ, ಗುರುತಿಸಿಕೊಂಡಿದ್ದರು. ಜನಮನ್ನಣೆ ಗಳಿಸಿಕೊಂಡಿದ್ದರು.
ಪ್ರಜ್ವಲ್ ಆರ್ಆರ್ ನಗರದ ‘ಅಮೃತ ಬಾರ್ ಆ್ಯಂಡ್ ರೆಸ್ಟೋರೆಂಟ್’ಗೆ ತಮ್ಮ ಸ್ನೇಹಿತರ ಜತೆ ತೆರಳಿದ್ದಾರೆ. ಹಲ್ಲೆಗೊಳಗಾದ ಚೇತನ್ ಎಂಬ ವ್ಯಕ್ತಿ ಕೂಡ ತನ್ನ ಸ್ನೇಹಿತರೊಂದಿಗೆ ಬಾರ್‌ಗೆ ಹೋಗಿದ್ದರು. ಈ ವೇಳೆ ಚೇತನ್, ಪ್ರಜ್ವಲ್ ಸ್ನೇಹಿತ ಮನು ಎಂಬುವವರನ್ನು ಕರೆದಿದ್ದಾರೆ. ಇದರಿಂದ ಅಲ್ಲಿಯೇ ಇದ್ದ ಪ್ರಜ್ವಲ್ ಕೋಪಗೊಂಡು ಚೇತನ್ ಮೇಲೆ ಹಲ್ಲೆ ಮಾಡಿದ್ದಾರೆ. ಬಾರ್‌ನೊಳಗೆ ಜಗಳ ಮಾಡಿದ್ದಲ್ಲದೇ, ಈ ಗುಂಪು ರಸ್ತೆಯಲ್ಲಿ ಕಿತ್ತಾಡಿಕೊಂಡಿದೆ. ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಜಕಾಲುವೆ ಒತ್ತುವರಿ ತೆರವಿಗೆ ಅಡ್ಡಿಪಡಿಸಿದ ನಂದೀಶ್ ರೆಡ್ಡಿ ವಿರುದ್ಧ ಬಿಬಿಎಂಪಿ ದೂರು
ಪ್ರಜ್ವಲ್ ಬಾರಿನಲ್ಲಿಯೇ ಇದ್ದ ಮರದ ತುಂಡಿನಿಂದ ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಚೇತನ್ ಆರ್ ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ಚೇತನ್ ಕೊಟ್ಟ ದೂರಿನನ್ವಯ ಎಫ್‌ಐಆರ್ ದಾಖಲು ಮಾಡಿಕೊಂಡು ಪೊಲೀಸರು ನೋಟಿಸ್ ನೀಡಿದ್ದಾರೆ. ಇದರ ಜೊತೆಗೆ ಬಾರ್ನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಹ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.