- ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
- ಅವಮಾನ ತಾಳಲಾರದೆ ಕೆಲಸ ತೊರೆದ ಮಹಿಳೆ
ರಾಜ್ಯ ರಾಜಧಾನಿ ಬೆಂಗಳೂರಿನ ಅಪಾರ್ಟ್‌ಮೆಂಟ್ ನಿವಾಸಿಯೊಬ್ಬರು ಮಹಿಳಾ ಸೆಕ್ಯುರಿಟಿ ಗಾರ್ಡ್‌ಗೆ ಈಜುಕೊಳದ ಕೊಳಚೆ ನೀರು ಕುಡಿಯುವಂತೆ ಒತ್ತಾಯಿಸಿ ಹಿಂಸೆ ನೀಡಿದ ಅಮಾನವೀಯ ಘಟನೆ ನಡೆದಿದೆ.
ರಾಜರಾಜೇಶ್ವರಿ ನಗರದ ಉನ್ನತ ಸೌಲಭ್ಯ ನಿರ್ವಹಣಾ ಕಂಪನಿಯಲ್ಲಿ ಹೊಂಗಸಂದ್ರದ ನಿವಾಸಿ 25 ವರ್ಷದ ಮಹಿಳೆ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲಸದ ನಿಮಿತ್ತ ಇವರನ್ನು ಬೊಮ್ಮನಹಳ್ಳಿಯ ದೇವರಚಿಕ್ಕನಹಳ್ಳಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ಗೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸಲು ಕಳುಹಿಸಿದ್ದಾರೆ.
ಜೂನ್ 14ರಂದು ಬೊಮ್ಮನಹಳ್ಳಿಯ ದೇವರಚಿಕ್ಕನಹಳ್ಳಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ಗೆ 25 ವರ್ಷದ ಮಹಿಳೆ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿರುತ್ತಾರೆ. ಈ ವೇಳೆ, ಅಪಾರ್ಟ್‌ಮೆಂಟ್ ಈಜುಕೊಳದಲ್ಲಿ ಸ್ನಾನ ಮಾಡಲು ಬಂದ ಅಪಾರ್ಟ್‌ಮೆಂಟ್‌ನ ನಿವಾಸಿಯೊಬ್ಬರು ಈಜುಕೊಳದಲ್ಲಿರುವ ಗಲೀಜು ನೀರು ನೋಡಿ ಕಿರುಚಾಡಿದ್ದಾರೆ.
ಈ ವೇಳೆ, ಮಹಿಳೆ ತಾನು ಸೆಕ್ಯೂರಿಟಿ ಡ್ಯೂಟಿಯಲ್ಲಿರುವುದಾಗಿ ಹಾಗೂ ಈಜುಕೊಳದ ನಿರ್ವಹಣೆಗೂ ತನಗೂ ಸಂಬಂಧವಿಲ್ಲ ಎಂದು ತಿಳಿಸಿದರೂ ಕೂಡ ಮಹಿಳೆಯನ್ನು ಅಪಾರ್ಟ್‌ಮೆಂಟ್ ನಿವಾಸಿಯೊಬ್ಬ ಬಲವಂತವಾಗಿ ಹಿಡಿದುಕೊಂಡು ಈಜುಕೊಳದ ಕೊಳಚೆ ನೀರನ್ನು ಬಾಟಲಿಯಲ್ಲಿ ಹಿಡಿದು ಕುಡಿಸಿದ್ದಾನೆ.
ಈ ಅವಮಾನ ತಾಳಲಾರದೆ ಮಹಿಳೆ ಕೆಲಸ ತೊರೆದಿದ್ದಾಳೆ. ಆರೋಪಿ ಆಕಾಶ್ ಎಂಬುವವರ ವಿರುದ್ಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ.
“ಜೂನ್ 14 ರಂದು ಬೆಳಗ್ಗೆ 11.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈಜುಕೊಳದ ಗೇಟ್ ಅನ್ನು ಮುಚ್ಚಿ ಆ ಸ್ಥಳದಿಂದ ನಾನು ಹೊರಬರದಂತೆ ತಡೆದಿದ್ದಾರೆ. ವಿನಾಕಾರಣ ನನ್ನನ್ನು ಅವಮಾನಿಸಿದ್ದಾರೆ” ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂತ್ರಸ್ತೆ ಭದ್ರತಾ ಮೇಲ್ವಿಚಾರಕ ಅನಿಕೇಶ್ ಚಕ್ರವರ್ತಿ ಮತ್ತು ನಿರ್ವಹಣಾ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಅವರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಈ ಸುದ್ದಿ ಓದಿದ್ದೀರಾ? ಇಬ್ಬರು ಯುವಕರಿಂದ ಬ್ಲ್ಯಾಕ್ ಮೇಲ್ ; ಯುವತಿ ಆತ್ಮಹತ್ಯೆ
“ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಆರೋಪಿಗೆ ನೋಟಿಸ್ ಕಳುಹಿಸಲಾಗಿದೆ. ನಿರ್ವಹಣಾ ವ್ಯವಸ್ಥಾಪಕರಿಗೆ ವಿಷಯ ತಿಳಿಸಲಾಗಿದೆ. ಅವರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.