ಯುವತಿಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿ, ಕೊಲೆ ಮಾಡಿ ಆಕೆಯ ಮೃತದೇಹವನ್ನು ಆರೋಪಿ ಅವರ ಮನೆ ಮುಂದೆ ಇಟ್ಟ ಘಟನೆ ಬೆಂಗಳೂರಿನ ಮಹದೇವಪುರಲ್ಲಿ ನಡೆದಿದೆ.
ಕಲಬುರಗಿ ಮಹಾನಂದ(21) ಕೊಲೆಯಾದ ಯುವತಿ. ಕೃಷ್ಣ ಚಂದ್ ಸೇಟಿ ಕೊಲೆ ಮಾಡಿದ ಆರೋಪಿ. ಸದ್ಯ ಆರೋಪಿಯನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಮೂಲದ ಮಹಾನಂದ ಹಾಗೂ ಆಕೆಯ ಅಕ್ಕ ಇಬ್ಬರೂ ಬೆಂಗಳೂರಿನ ಶೆಲ್ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ಮಹದೇವಪುರದ ಲಕ್ಷ್ಮಿ ಸಾಗರ ಲೇಔಟ್ನಲ್ಲಿ ನೆಲೆಸಿದ್ದರು. ಈ ಯುವತಿಯರ ಪಕ್ಕದ ಮನೆಯಲ್ಲಿ ಒಡಿಶಾ ಮೂಲದ ಕೃಷ್ಣಚಂದ್ ಸೇಟಿ ವಾಸವಿದ್ದನು. ಈತ ನಗರದ ಟೆಕ್ ಪಾರ್ಕ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು.
ಮಹಾನಂದ ಆ. 10 ಶೆಲ್ ಪೆಟ್ರೋಲ್ ಬಂಕ್‌ಗೆ ಕೆಲಸಕ್ಕೆ ತೆರಳದೆ ಮನೆಯಲ್ಲೇ ಇದ್ದಳು. ಈ ವೇಳೆ, ಮನೆಯಲ್ಲಿ ರಾತ್ರಿ ಅಡುಗೆ ಮಾಡಲು ಒಲೆಯ ಮೇಲೆ ಅನ್ನಕ್ಕೆ ಇಟ್ಟು, ಹೊರಗೆ ಬಂದಿದ್ದಳು.
ಯುವತಿ ಹೊರಗಡೆ ಬಂದ ವೇಳೆ, ಆರೋಪಿ ಕೃಷ್ಣ ಚಂದ್ ಸಾಟಿ ಆಕೆಯನ್ನು ತನ್ನ ಮನೆಯೊಳಗೆ ಎಳೆದುಕೊಂಡು ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ. ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿ, ಕಾಪಾಡುವಂತೆ ಕಿರುಚಾಡಿದ್ದಾಳೆ. ಆರೋಪಿ ಯುವತಿಯನ್ನು ಒಂದು ಕೈಯಿಂದ ಆಕೆಯ ಬಾಯಿ, ಮೂಗು ಮುಚ್ಚಿ ಇನ್ನೊಂದು ಕೈಯಿಂದ ಆಕೆಯ ಕತ್ತು ಹಿಸುಕಿದ್ದಾನೆ.
ಈ ವೇಳೆ, ಯುವತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಬಳಿಕ ಮೃತದೇಹವನ್ನು ಆರೋಪಿ ಬಟ್ಟೆಯಲ್ಲಿ ಸುತ್ತಿ ಮೂಲೆಯೊಂದರಲ್ಲಿ ಇಟ್ಟಿದ್ದನು. ಬಳಿಕ ಬೆಳಗಿನ ಜಾವ 5:30 ರ ಸುಮಾರಿಗೆ ಶವವನ್ನು ಆಕೆಯ ಮನೆಯ ಮುಂದೆ ಇಟ್ಟಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಬಿಎಂಪಿ ಆವರಣದಲ್ಲಿ ಅಗ್ನಿ ಅವಘಡ; ತನಿಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಸ್ವಲ್ಪ ಸಮಯದ ನಂತರ ಅಕ್ಕ-ಪಕ್ಕದ ಜನರು ಮನೆ ಮುಂದೆ ಸೇರಿದ್ದಾರೆ. ಈ ವೇಳೆ, ಆರೋಪಿಯೂ ಕೂಡ ಜನರ ಮಧ್ಯೆ ಸೇರಿ ಏನು ತಿಳಿಯದಂತೆ ನಿಂತಿದ್ದಾನೆ.
ಸದ್ಯ ಪೊಲೀಸರು ಆರೋಪಿ ಕೃಷ್ಣ ಚಂದ್ ಸಾಟಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.