- ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು
ಖಾಸಗಿ ಆಸ್ಪತ್ರೆಯೊಂದರಲ್ಲಿ ಕುಡಿದ ಮತ್ತಿನಲ್ಲಿದ್ದ ಇಬ್ಬರು ವ್ಯಕ್ತಿಗಳು ವೈದ್ಯರ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೊಂಗಸಂದ್ರದ ಬೇಗೂರು ಮುಖ್ಯರಸ್ತೆಯಲ್ಲಿರುವ ಸೋನು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ 29 ವರ್ಷದ ಡಾ.ಜಮಾಲ್ ಹುಸೇನ್ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ.
ಹೊಂಗಸಂದ್ರದ ಮುನಿರೆಡ್ಡಿ ಲೇಔಟ್ ನಿವಾಸಿ ಹುಸೇನ್ ಕಳೆದ ಆರು ತಿಂಗಳಿಂದ ಸೋನು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಮಧ್ಯಾಹ್ನ 1.50ರಿಂದ 1.55ರ ನಡುವೆ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಗ ಈ ಘಟನೆ ನಡೆದಿದೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ಇಬ್ಬರು ಆರೋಪಿಗಳ ಪೈಕಿ ಓರ್ವ ಆರೋಪಿಯ ತಾಯಿ ವಾಣಿಶ್ರೀ ಎರಡು ದಿನಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆರೋಪಿಯ ತಾಯಿಗೆ ಹುಸೇನ್ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ. ತನ್ನ ತಾಯಿಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದ ಕಾರಣ ಆರೋಪಿಯು ಹತಾಶೆಗೊಂಡಿದ್ದನು ಎಂದು ತಿಳಿದುಬಂದಿದೆ.
ಆರೋಪಿಯು ವೈದ್ಯರನ್ನು ಕೇಳಿಕೊಂಡು ವಾರ್ಡ್‌ಗೆ ಪ್ರವೇಶಿಸಿದ್ದಾನೆ. ಆರೋಪಿಗಳು ವೈದ್ಯರ ಪ್ರಿಸ್ಕ್ರಿಪ್ಷನ್ ಪ್ರತಿಯನ್ನು ತೋರಿಸುವ ನೆಪದಲ್ಲಿ ಡಾ.ಹುಸೇನ್‌ಗೆ ಥಳಿಸಲು ಪ್ರಾರಂಭಿಸಿದ್ದಾರೆ. ಮತ್ತೊಬ್ಬ ಆರೋಪಿ ಚಾಕು ಹೊರತೆಗೆದು ವೈದ್ಯರ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿದ್ದಾನೆ. ವೈದ್ಯರು ತಪ್ಪಿಸಿಕೊಳ್ಳಲು ವಾರ್ಡ್‌ನೊಳಗಿನ ಶೌಚಾಲಯದ ಕಡೆಗೆ ಓಡಿ, ಬಾಗಿಲು ಹಾಕಿಕೊಂಡಿದ್ದಾರೆ.
“ಒಳಗೆ ನಡೆಯುತ್ತಿರುವ ಗದ್ದಲ ಕೇಳಿದ ಇತರ ಸಿಬ್ಬಂದಿ ವೈದ್ಯರ ರಕ್ಷಣೆಗೆ ಬಂದಿದ್ದಾರೆ. ಘಟನೆಯ ಬಗ್ಗೆ ವೈದ್ಯರಾಗಲೀ ಅಥವಾ ಆಸ್ಪತ್ರೆಯವರಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಮದ್ಯದ ಅಮಲಿನಲ್ಲಿದ್ದರು” ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರ‍್ಯಾಪಿಡೋ ಆಟೋಗಳ ಮೇಲೆ ಸಾರಥಿ ಆಟೋ ಚಾಲಕರ ದಾಳಿ: ದೂರು ದಾಖಲು
“ಹುಸೇನ್ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಬ್ಬರ ವಿರುದ್ಧ ಕೊಲೆ ಯತ್ನ (ಐಪಿಸಿ 307), ಮೆಡಿಕೇರ್ ಸೇವಾ ಸಿಬ್ಬಂದಿ ವಿರುದ್ಧ ಕರ್ನಾಟಕ ನಿಷೇಧ ಮತ್ತು ಮೆಡಿಕೇರ್ ಸೇವಾ ಸಂಸ್ಥೆಗಳಲ್ಲಿನ ಆಸ್ತಿ ಹಾನಿ ಕಾಯ್ದೆ 2009ರ ಪ್ರಕರಣವನ್ನು ದಾಖಲಿಸಲಾಗಿದೆ” ಎಂದರು.
ಬೊಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.