- ಮತಗಟ್ಟೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ
- ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆ
ರಾಜ್ಯದಲ್ಲಿ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆ, ಮೇ 10ರಂದು ಮತದಾನ ನಡೆಯಲಿದೆ. ಈ ವೇಳೆ ಇವಿಎಂ ಮತಯಂತ್ರಗಳಿಗೆ ಧಾರ್ಮಿಕ ವಿಧಿ ವಿಧಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಎಂದು ನೈಜ ಹೋರಾಟಗಾರರ ವೇದಿಕೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಪತ್ರದಲ್ಲಿ ಏನಿದೆ?
ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯು ಮೇ 10ರಂದು ನಡೆಯಲಿದೆ. ರಾಜ್ಯದ ಮತದಾನ ಕೇಂದ್ರಗಳಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ, ಜೈನ, ಪಾರ್ಸಿ ಸೇರಿದಂತೆ ಯಾವುದೇ ಧರ್ಮದ ಪೂಜೆ, ಪ್ರಾರ್ಥನೆಗಳನ್ನು ಇವಿಎಂ ಮತಯಂತ್ರಗಳಿಗೆ ಮಾಡದಂತೆ ಮುಂಜಾಗ್ರತ ಕ್ರಮವಾಗಿ ಮತಗಟ್ಟೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ, ಸೂಚನೆಗಳನ್ನು ಹೊರಡಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆ ಚುನಾವಣಾ ಆಯುಕ್ತರಲ್ಲಿ ಮನವಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿಗೆ ಪ್ರಧಾನಿ ಆಗಮನ; ಎಲ್ಲೆಲ್ಲಿ ಸಂಚಾರ ನಿರ್ಬಂಧ?
ಈ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಜ್ಯದ ಹಲವಾರು ಮತಗಟ್ಟೆಗಳಲ್ಲಿ ತೋರಣ, ಅರಿಶಿನ, ಕುಂಕುಮ, ಪ್ರಾರ್ಥನೆ, ನಮಾಜ್ ಇತ್ಯಾದಿಗಳು ನಡೆದ ಬಗ್ಗೆ ಗಮನಕ್ಕೆ ಬಂದಿದೆ. ಹಾಗಾಗಿ, ಮತಗಟ್ಟೆ ಕೇಂದ್ರಗಳಲ್ಲಿ ಮುಂದೆ ನಡೆಯಬಹುದಾದ ಇಂತಹ ಧಾರ್ಮಿಕ ಚಟುವಟಿಕೆಗಳನ್ನು ಮತಗಟ್ಟೆಯ ಅಧಿಕಾರಿಗಳು ನಡೆಯದಂತೆ ತಡೆಗಟ್ಟಬೇಕು. ಮತಗಟ್ಟೆಯಲ್ಲಿ ಅಭ್ಯರ್ಥಿಗಳ ಏಜೆಂಟರುಗಳು, ರಾಜಕೀಯ ಪಕ್ಷದ ಕಾರ್ಯಕರ್ತರು ಮತಗಟ್ಟೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಇವಿಎಂ ಯಂತ್ರಗಳಿಗೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದ್ದಲ್ಲಿ ಅಂತಹ ವ್ಯಕ್ತಿಗಳನ್ನು ಮತಗಟ್ಟೆಯಿಂದ ಹೊರಗೆ ಕಳುಹಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್ ಒತ್ತಾಯಿಸಿದ್ದಾರೆ.