- ರಕ್ತ ಪರೀಕ್ಷೆ ಮಾಡಿದ 1009 ಜನರ ಪೈಕಿ 905 ಜನರಲ್ಲಿ ಡೆಂಗ್ಯೂ ದೃಢ
- ಡೆಂಗ್ಯೂ ಜ್ವರದಿಂದ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ
ರಾಜ್ಯದಲ್ಲಿ ಮುಂಗಾರು ಮಳೆ ಈಗ ಚುರುಕುಗೊಂಡಿದ್ದು, ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಳೆದ 11 ದಿನದಲ್ಲಿ ಬರೋಬ್ಬರಿ 178 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಮಳೆಯ ಜತೆಗೆ ತಂಪಾದ ವಾತಾವರಣ ಇದ್ದು, ಹಲವಾರು ಜನಕ್ಕೆ ಜ್ವರ, ಶೀತ, ನೆಗಡಿಯಂತಹ ಕಾಯಿಲೆಗಳು ಬಂದಿವೆ. ಈ ವರ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 3,565 ಡೆಂಗ್ಯೂ ಶಂಕಿತರ ಗುರುತು ಪತ್ತೆಯಾಗಿದೆ. ಈ ಪೈಕಿ 1,009 ಜನರ ರಕ್ತದ ಮಾದರಿ ಪರೀಕ್ಷೆಗೆ ರವಾನೆ ಮಾಡಲಾಗಿದೆ. ರಕ್ತ ಪರೀಕ್ಷೆಗೆ ರವಾನೆ ಮಾಡಿದ 1,009 ಜನರ ಪೈಕಿ 905 ಜನರಲ್ಲಿ ಡೆಂಗ್ಯೂ ಸೋಂಕು ದೃಢವಾಗಿದೆ.
ನಗರದಲ್ಲಿ ಇಲ್ಲಿಯವರೆಗೆ 919 ಡೆಂಗಿ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಡೆಂಗ್ಯೂ ಜ್ವರದಿಂದ ಯಾವುದೇ ಮರಣ ಪ್ರಕರಣ ದಾಖಲಾಗಿಲ್ಲ. 2022ರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 585 ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದವು.
ಜ್ವರ, ತಲೆನೋವು, ಮೈಕೈ ನೋವು, ಕೀಲು ನೋವು, ವಾಕರಿಕೆ, ಕಣ್ಣುಗಳ ಹಿಂಭಾಗದಲ್ಲಿ ನೋವು, ಊದಿಕೊಂಡಿರುವ ಗ್ರಂಥಿಗಳು, ಚರ್ಮದ ಭಾಗದಲ್ಲಿ ದದ್ದುಗಳು, ಸುಸ್ತು, ಶೀತ, ಗಂಟಲು ನೋವು, ಹೊಟ್ಟೆನೋವು ಕಾಣಿಸಿಕೊಳ್ಳುವುದು ಡೆಂಗ್ಯೂ ರೋಗದ ಲಕ್ಷಣಗಳಾಗಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಸ್ತೆಯಲ್ಲಿ ಹಾರ್ನ್ ಮಾಡಿ ದಾರಿ ಕೇಳಿದ್ದಕ್ಕೆ ಕಾರು ಅಡ್ಡಗಟ್ಟಿ ಗಾಜು ಒಡೆದ ಕಿಡಿಗೇಡಿಗಳು
ಡೆಂಗ್ಯೂ ತಡೆಗಟ್ಟಲು ಬೆಳಗಿನ ಸಮಯದಲ್ಲಿ ಸೊಳ್ಳೆಗಳು ಕಚ್ಚದಂತೆ ಎಚ್ಚರವಹಿಸಬೇಕು. ನೀರಿನ ತೊಟ್ಟಿಗಳನ್ನು ಶುಚಿಗೊಳಿಸಬೇಕು. ಮನೆಯ ಸುತ್ತಮುತ್ತಲ ಪ್ರದೇಶಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ನಿತ್ಯ ಬಿಸಿನೀರು ಕುಡಿಯಬೇಕು. ಸೊಳ್ಳೆ ನಾಶಕ ಔಷಧಿಗಳನ್ನು ಮನೆಯ ಸುತ್ತ ಸಿಂಪಡಿಸಬೇಕು.