ಬೈಕ್ನಲ್ಲಿ ತಂದೆಯೊಂದಿಗೆ ಶಾಲೆಗೆ ತೆರಳುತ್ತಿದ್ದ ನಾಲ್ಕು ವರ್ಷದ ಮಗುವಿನ ಮೇಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಹರಿದು ಮಗು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ.
ನಾಲ್ಕು ವರ್ಷದ ಮಗು ಪೂರ್ವಿ ರಾವ್ ಮೃತ ದುರ್ದೈವಿ. ಬೆಂಗಳೂರು ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ನಲ್ಲಿ ಪೂರ್ವಿ ಪ್ರಿಕೆಜಿ ಓದುತ್ತಿದ್ದಳು. ಪೂರ್ವಿ ರಾವ್ ತಂದೆ ಪ್ರಸನ್ನ ಸಿಸ್ಕೋ ಕಂಪನಿಯ ಉದ್ಯೋಗಿಯಾಗಿದ್ದಾರೆ.
ಪೂರ್ವಿಯನ್ನು ನಿತ್ಯ ತಂದೆ ಪ್ರಸನ್ನ ಅವರು ಬೈಕ್ನಲ್ಲಿ ಶಾಲೆಗೆ ಬಿಟ್ಟು ಬರುತ್ತಿದ್ದರು. ಎಂದಿನಂತೆ ಆ.16ರಂದು ಪೂರ್ವಿಯನ್ನು ಶಾಲೆಗೆ ಬಿಡಲು ಬೈಕ್ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಬಿಎಂಟಿಸಿ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನಲ್ಲಿದ್ದ ತಂದೆ-ಮಗಳು ಇಬ್ಬರು ಕೆಳಗೆ ಬಿದ್ದಿದ್ದಾರೆ. ತಂದೆ ಬೈಕ್ನ ಎಡಬದಿಗೆ ಬಿದ್ದಿದ್ದರೆ, ಮಗಳು ಪೂರ್ವಿ ಬೈಕ್ನ ಬಲಬದಿಗೆ ಬಿದ್ದಿದ್ದಾಳೆ. ಈ ವೇಳೆ, ಪೂರ್ವಿ ಮೇಲೆ ಬಿಎಂಟಿಸಿ ಬಸ್ ಹರಿದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ನಗರದ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಈ ದುರ್ಘಟಣೆ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಕುಡಿಯುವ ನೀರಿನ ಬೆಲೆ ದುಪ್ಪಟ್ಟು; ಕಂಗಾಲಾದ ನಗರದ ನಾಗರಿಕರು
ಈ ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಬಸ್ ಚಾಲಕನನ್ನ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.