ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ವೀರಾರ್ಜುನ ವಿಜಯ್ (31), ಹೇಮಾವತಿ (29) ಹಾಗೂ ಇಬ್ಬರು ಮಕ್ಕಳಾದ ಮೋಕ್ಷಾ ಮೇಘನಯನಾ (ಎರಡೂವರೆ ವರ್ಷ), ಸೃಷ್ಟಿ ಸುನಯನಾ(8 ತಿಂಗಳು) ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದಂಪತಿ ಆಂಧ್ರ ಮೂಲದವರು. ಮೃತ ವೀರಾರ್ಜುನ್ ಐಟಿಪಿಎಲ್ನಲ್ಲಿರುವ ಯೂರೋ ಪಿಲ್ಸ್ ಅನ್ನೋ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ವೀರಾರ್ಜುನ್ ವಿಜಯ್ 6 ವರ್ಷಗಳ ಹಿಂದೆ ಹೇಮಾವತಿ ಅವರನ್ನು ಮದುವೆಯಾಗಿದ್ದರು. ಈ ದಂಪತಿ ನಗರದ ಸೀಗೆಹಳ್ಳಿಯ ಸಾಯಿ ಗಾರ್ಡನ್ ಅಪಾರ್ಟ್ಮೆಂಟ್ವೊಂದರಲ್ಲಿ ನೆಲೆಸಿದ್ದರು.
“ಕಳೆದ ಜುಲೈ 31ರಂದು ರಾತ್ರಿ ದಂಪತಿ ಇಬ್ಬರು ಹೆಣ್ಣುಮಕ್ಕಳನ್ನು ಕೊಂದು ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಹೋಗಿ ಮನೆಯ ಬಾಗಿಲನ್ನು ಮುರಿದು ಒಳಗೆ ಹೋಗಿ ನೋಡಿದಾಗ ಮನೆಯಲ್ಲಿ ಮೃತದೇಹಗಳು ಪತ್ತೆಯಾಗಿವೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಸ ವರ್ಗಾವಣೆ ಕೇಂದ್ರಗಳ ತನಿಖೆಗೆ 3 ಸದಸ್ಯರ ತಂಡ ರಚನೆ
“ಸದ್ಯ ದಂಪತಿಯ ಆತ್ಮಹತ್ಯೆಗೆ ಕಾರಣ ಏನು ಎಂಬ ಬಗ್ಗೆ ಮಾಹಿತಿ ಇಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ. ಇಬ್ಬರು ಮಕ್ಕಳನ್ನು ಕೊಂದು ವಿಜಯ್ ಹಾಗೂ ಹೇಮಾವತಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ” ಎಂದು ಪೊಲೀಸ್ ಮೂಲಗಳು ಹೇಳಿವೆ.
ಸ್ಥಳಕ್ಕೆ ಕಾಡುಗೋಡಿ ಠಾಣಾ ಪೊಲೀಸರು ಹಾಗೂ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.