- ಐದು ಹುಲಿ ಉಗುರುಗಳಿರುವ ಬ್ಯಾಗ್‌ನೊಂದಿಗೆ ವ್ಯಕ್ತಿಯನ್ನು ಪತ್ತೆ ಹಚ್ಚಿದ ಪೊಲೀಸರು
- ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಬಂಧಿತನನ್ನು ಒಳಪಡಿಸಲು ಯೋಜಿಸಿದ್ದೇವೆ ಎಂದ ಪೊಲೀಸರು
ಹುಲಿ ಉಗುರುಗಳನ್ನು ಮಾರಾಟ ಮಾಡುತ್ತಿದ್ದ 55 ವರ್ಷದ ವ್ಯಕ್ತಿಯನ್ನು ಮಂಗಳವಾರ ಬೆಂಗಳೂರಿನ ಚಾಮರಾಜಪೇಟೆಯ ವಿಶ್ವೇಶ್ವರಪುರಂ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರಿನ ರೈತ ರಘುಕುಮಾರ್ ಬಂಧಿತ. ಚಾಮರಾಜಪೇಟೆಯ 4ನೇ ಮುಖ್ಯರಸ್ತೆಯಲ್ಲಿ ವ್ಯಕ್ತಿಯೋರ್ವ ಹುಲಿ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡವು ಶೋಧ ನಡೆಸಿ ಐದು ಹುಲಿ ಉಗುರುಗಳಿರುವ ಬ್ಯಾಗ್‌ನೊಂದಿಗೆ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ.
ಚಿಕ್ಕಮಗಳೂರಿನ ಬುಡಕಟ್ಟು ಜನಾಂಗದವರಿಂದ ಉಗುರುಗಳನ್ನು ಖರೀದಿಸಿ ಬೆಂಗಳೂರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದೆ ಎಂದು ರಘುಕುಮಾರ್ ಪೊಲೀಸರಿಗೆ ತಿಳಿಸಿದ್ದಾನೆ.
ಹುಲಿ ಉಗುರುಗಳಿಗೆ ಬೇಡಿಕೆಯಿದೆ. ಏಕೆಂದರೆ, ಅವು ಅದೃಷ್ಟವನ್ನು ತರುತ್ತವೆ. ಪೆಂಡೆಂಟ್‌ಗಳಾಗಿ ಧರಿಸಿರುವವರಿಗೆ ಧೈರ್ಯವನ್ನು ನೀಡುತ್ತವೆ ಎಂದು ಜನರು ನಂಬುತ್ತಾರೆ. ವಶಪಡಿಸಿಕೊಂಡ ಉಗುರುಗಳನ್ನು ಪೊಲೀಸರು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಇಂದು ಆರ್‌ಸಿಬಿ-ಡೆಲ್ಲಿ ಮ್ಯಾಚ್: ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ವಾಹನ ನಿಲುಗಡೆಗೆ ನಿರ್ಬಂಧ
“ಹುಲಿ ಉಗುರುಗಳನ್ನು ರಘುಕುಮಾರ್‌ಗೆ ಮಾರಾಟ ಮಾಡಿದ್ದ ವ್ಯಕ್ತಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ. ಬಂಧಿತ ವ್ಯಕ್ತಿ ಬುಡಕಟ್ಟು ಜನರ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿರಬಹುದು ಅಥವಾ ಮಾಹಿತಿಯನ್ನು ಮರೆಮಾಚುತ್ತಿರಬಹುದು. ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಬಂಧಿತನನ್ನು ಒಳಪಡಿಸಲು ಯೋಜಿಸಿದ್ದೇವೆ ”ಎಂದು ಪೊಲೀಸ್ ಅಧಿಕಾರಿ ಹೇಳಿದರು.