- ನನ್ನ ಮಗನ ಬಗ್ಗೆ ಸುಳ್ಳು ವದಂತಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ ಆದಿತ್ಯ ತಾಯಿ
- ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಪರೀಕ್ಷೆ ಬರೆಯುವಾಗ ನಕಲು ಮಾಡಿ, ಸಿಕ್ಕಿಬಿದ್ದ ವಿದ್ಯಾರ್ಥಿಯೊಬ್ಬ ಮನನೊಂದು ಕಾಲೇಜಿನ 8ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತನ ತಾಯಿ ಸಾಮಾಜಿಕ ಜಾಲತಾಣದಲ್ಲಿ ಪ್ರಕರಣದ ಕುರಿತಂತೆ ಸುದೀರ್ಘ ಮಾಹಿತಿ ನೀಡಿದ್ದಾರೆ. ಮಗನ ಬಗ್ಗೆ ಸುಳ್ಳು ವದಂತಿ ಹರಡದಂತೆ ಮನವಿ ಮಾಡಿದ್ದಾರೆ.
ಆದಿತ್ಯ ಪ್ರಭು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಇವರು ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಪರೀಕ್ಷೆಯಲ್ಲಿ ಮೊಬೈಲ್ ಮುಖಾಂತರ ನಕಲು ಮಾಡುವ ವೇಳೆ ಪ್ರಾಧ್ಯಾಪಕರ ಕೈಗೆ ಸಿಕ್ಕಿ ಬಿದ್ದು ಮರ್ಯಾದೆ ಹೋಗುತ್ತದೆ ಎಂದು ಹೆದರಿ ಕ್ಯಾಂಪಸ್‌ನಲ್ಲಿರುವ ಕಟ್ಟಡದ 8ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿ ಮಾಧ್ಯಮಗಳಿಗೆ ಮಾಹಿತಿ ನೀಡಿತ್ತು.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮೃತ ಆದಿತ್ಯ ಪ್ರಭು ತಾಯಿ #justiceforadityaprabhu ಎಂಬ ಅಭಿಯಾನ ಆರಂಭಿಸಿದ್ದು, ಮಗನ ಸಾವಿನ ಪ್ರಕರಣದ ಕುರಿತಂತೆ ಹಲವಾರು ಅಂಶಗಳನ್ನು ಹಂಚಿಕೊಂಡಿದ್ದಾರೆ.
ಆದಿತ್ಯ ತಾಯಿ ಹೇಳಿದ್ದೇನು?
ನಾನು ಆದಿತ್ಯ ಪ್ರಭು ತಾಯಿ 19 ವರ್ಷದ ನನ್ನ ಮಗ ಆದಿತ್ಯ ಬೆಂಗಳೂರಿನ ಆರ್‌ಆರ್ ರಸ್ತೆ ಕ್ಯಾಂಪಸ್‌ನ ಪಿಇಎಸ್ ಕಾಲೇಜಿನ ವಿದ್ಯಾರ್ಥಿ. ಸಿಎಸ್‌ಇ 1 ನೇ ವರ್ಷ ವಿದ್ಯಾಭ್ಯಾಸ ಮಾಡುತ್ತಿದ್ದನು. ಜುಲೈ 17ರಂದು ಆದಿತ್ಯ ಕ್ಯಾಂಪಸ್‌ನ ಕಟ್ಟಡದ 8ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದಿತ್ಯ ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದಿದ್ದಾನೆ ಎಂದು ಕಾಲೇಜು ಆಡಳಿತ ಮಂಡಳಿ ಮಾಧ್ಯಮಗಳಿಗೆ ತಿಳಿಸಿದೆ.
ಕಾಲೇಜು ಆಡಳಿತ ಮಂಡಳಿ ಆದಿತ್ಯನ ಸಾವನ್ನು ಮುಚ್ಚಿಡಲು ಪ್ರಯತ್ನಿಸಿದೆ. ನನ್ನ ಮಗನಿಗೆ ಕಿರುಕುಳ ನೀಡಿ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಜುಲೈ 17 ರಂದು ಬೆಳಗ್ಗೆ 11:45ಕ್ಕೆ ಆದಿತ್ಯ ನನಗೆ ಕರೆ ಮಾಡಿ, ಫೋನ್ ಅನ್ನು ಬ್ಯಾಗ್‌ಗೆ ಹಾಕಲು ಮರೆತಿದ್ದೇ, ಫೋನ್ ಪ್ಯಾಂಟ್ ಜೇಬಿನಲ್ಲಿ ಇತ್ತು. ಪರೀಕ್ಷೆ ಬರೆಯುವಾಗ ಮೊಬೈಲ್ ಪ್ಯಾಂಟ್‌ನಲ್ಲಿರುವುದು ನೆನಪಿಗೆ ಬಂದಿತು. ಆಗ ಮೊಬೈಲ್ ಫೋನ್ ತೆಗೆದು ಬೆಂಚ್ ಅಥವಾ ನೆಲದ ಮೇಲೆ ಇಟ್ಟೆ ಎಂದು ಸ್ವತಃ ಆದಿತ್ಯ ನನಗೆ ತಿಳಿಸಿದ್ದ. ಈ ವೇಳೆ ಫೋನ್ ಏರೋಪ್ಲೇನ್ ಮೋಡ್‌ನಲ್ಲಿತ್ತು. ಇದನ್ನು ನೋಡಿದ ಇನ್ವಿಜಿಲೇಟರ್ ಆದಿತ್ಯನ ಫೋನ್ ವಶಕ್ಕೆ ಪಡೆದರು. ಅದಾಗಲೇ ಆದಿತ್ಯ ಪೂರ್ಣ ಪರೀಕ್ಷೆ ಬರೆದಿದ್ದನು ಎಂದು ಹೇಳಿದ್ದನು.
ಈ ವೇಳೆ ಆದಿತ್ಯ ತನಗೆ ಕಿರುಕುಳ ನೀಡುತ್ತಿದ್ದಾರೆ. ಇಂತಹ ಕೆಲಸ ಮಾಡುವುದಕ್ಕಿಂತ ಸಾಯುವುದೇ ಮೇಲು ಎಂದು ಹೇಳುತ್ತಿದ್ದಾರೆ ಎಂದು ನೋವು ತೋಡಿಕೊಂಡಿದ್ದನು. ಕೂಡಲೇ ನನಗೆ ಕಾಲೇಜಿಗೆ ಬರಲು ತಿಳಿಸಿದ್ದನು.
ಸ್ವಲ್ಪ ಸಮಯದ ನಂತರ, ಕಾಲೇಜಿನವರಿಂದ ನನಗೆ ಕರೆ ಬಂದಿತು. ಕಾಲೇಜಿಗೆ ಬರಲು ಹೇಳಿದರು. ಪರೀಕ್ಷೆ ಮುಗಿಯಲು ಕೇವಲ 4 ನಿಮಿಷಗಳು ಬಾಕಿ ಇರುವಾಗ 11:26 ಕ್ಕೆ ಇನ್ವಿಜಿಲೇಟರ್‌ಗಳು ಮೊಬೈಲ್ ನೋಡಿದ್ದಾರೆ ಎಂದು ತರಗತಿಯಲ್ಲಿನ ವಿದ್ಯಾರ್ಥಿಗಳಿಂದ ನನಗೆ ನಂತರ ತಿಳಿಯಿತು.
ಕಾಲೇಜಿಗೆ ತಲುಪಿದಾಗ, ಕಚೇರಿಯಲ್ಲಿ ಯಾರೂ ಇರಲಿಲ್ಲ ಮತ್ತು ನನಗೆ ಕಾಯಲು ಹೇಳಿದರು. ನಾನು ಸುಮಾರು 1 ಗಂಟೆ ಕಾಯುತ್ತಿದ್ದೆ. ನಂತರ ಮಾರ್ಗದರ್ಶಕ ಮತ್ತು ಸಿಒಇ ಬಂದು ನನ್ನನ್ನು ಕಚೇರಿಗೆ ಕರೆದರು. ಬಳಿಕ ಆದಿತ್ಯನನ್ನು ಹುಡುಕಲಾರಂಭಿಸಿದರು. ಆದಿತ್ಯನಿಗೆ ಅಲ್ಲೇ ಕುಳಿತುಕೊಳ್ಳಲು ಹೇಳಿದ್ದೆವು ಎಂದು ಕಚೇರಿಯವರು ಹೇಳಿದರು. ಅವನು ತನ್ನ ಸ್ನೇಹಿತರೊಂದಿಗೆ ಸುತ್ತಾಡುತ್ತಿರಬೇಕು ಎಂದು ನನಗೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪರೀಕ್ಷೆ ಬರೆಯುವಾಗ ನಕಲು ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿ ಆತ್ಮಹತ್ಯೆ
ನಾನು ಅವನ ವಿರುದ್ಧ ಇಂತಹ ಗಂಭೀರ ಆರೋಪಗಳು ಬಂದಾಗ ಆದಿತ್ಯ ಸ್ನೇಹಿತರೊಂದಿಗೆ ಹೊರಗೆ ಹೋಗುವುದು ಅಸಾಧ್ಯ ಎಂದು ನಾನು ಹೇಳಿದೆ. ಬಳಿಕ ಆದಿತ್ಯನನ್ನು ಹುಡುಕಲಾರಂಭಿಸಿದರು. ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಹುಡುಕಿದಾಗ ಎಲ್ಲೂ ಆದಿತ್ಯ ಕಾಣದಾಗ ನನ್ನ ಮಗ ಅಪಾಯದಲ್ಲಿರಬಹುದು ಎಂದು ಹೇಳಿದೆ. ಆದರೆ, ಕಚೇರಿ ಸಿಬ್ಬಂದಿ ಪದೇಪದೇ ಸ್ನೇಹಿತರೊಂದಿಗೆ ಸುತ್ತಾಡಲು ಹೋಗಿರಬಹುದು ಎಂದು ಹೇಳುತ್ತಿದ್ದರು.
ಬಳಿಕ ಕರೆಗಳು ಬರಲು ಆರಂಭಿಸಿದವು. ಅವರು ಹೊರಗೆ ಧಾವಿಸಿದರು. ನಾನು ಅವರನ್ನು ಹಿಂಬಾಲಿಸಿದೆ. ಅಲ್ಲಿ ಅದಾಗಲೇ ಆಂಬ್ಯುಲೆನ್ಸ್ ಮತ್ತು ಪೋಲಿಸ್ ಬಂದಿರುವುದನ್ನು ಕಂಡೆ, ಆಗ ನನ್ನ ಮಗನಿಗೆ ಏನಾಯಿತು ಎಂದು ಕೂಗಲು ಪ್ರಾರಂಭಿಸಿದೆ. ಆಗ ನನ್ನ ಮಗ ಜೀವಂತ ಇಲ್ಲ ಎಂದು ಹೇಳಿದರು. ಆದಿತ್ಯನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬದುಕಿಸಲು ಪ್ರಯತ್ನಿಸುವಂತೆ ಕೇಳಿಕೊಂಡೆ. ನಾನು ಎಷ್ಟು ಗೋಗರೆದರೂ ಕೇಳಲಿಲ್ಲ ಎಂದು ಬರೆದುಕೊಂಡಿದ್ದಾರೆ.
ಅಂಥ ಪರಿಸ್ಥಿತಿಯಲ್ಲೂ 2-3 ಜನ ನನ್ನನ್ನು ಹಿಡಿದು ಮಗನ ಬಳಿಗೆ ಕರೆದುಕೊಂಡು ಹೋಗಿ ಆದಿತ್ಯನೇ ಎಂದು ಗುರುತಿಸಿ ಖಚಿತ ಪಡಿಸಲು ತಿಳಿಸಿದರು. ಅಲ್ಲದೆ ಒಂದು ಪತ್ರಕ್ಕೆ ಸಹಿ ಮಾಡಲು ಒತ್ತಾಯಿಸಿದರು. ಹಾಗೆ ಸಹಿ ಮಾಡಿದ ಬಳಿಕವಷ್ಟೇ ಆಸ್ಪತ್ರೆಗೆ ಕರೆದೊಯ್ಯುವುದು ಎಂದರು. ಒತ್ತಾಯದಿಂದ ನನ್ನ ಸಹಿ ತೆಗೆದುಕೊಳ್ಳಲಾಯಿತು. ನಾನು ಈಗ ಅದರ ಬಗ್ಗೆ ಯೋಚಿಸಿದಾಗ ಅದು ಸಂಪೂರ್ಣವಾಗಿ ಅಮಾನವೀಯವಾಗಿದೆ.
ಇದು ಬಹುಶಃ ಈ ಪ್ರಕರಣದಿಂದ ಅವರ ಕೈಗಳನ್ನು ತೊಳೆದುಕೊಳ್ಳುವ ಸಂಗತಿಯಾಗಿದೆ. ನಾನು ಒಬ್ಬಂಟಿಯಾಗಿದ್ದರಿಂದ ಅವರು ನನ್ನ ಭಾವನಾತ್ಮಕ ಸ್ಥಿತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.
ಕಾಲೇಜಿನಿಂದ ಒಬ್ಬನೇ ಒಬ್ಬ ವ್ಯಕ್ತಿ, ಡೀನ್, ಸಿಇಒ, ಪ್ರಾಧ್ಯಾಪಕರು, ಸಿಒಇ, ಅವರ ಮಾರ್ಗದರ್ಶಕರು ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಲಿಲ್ಲ. ಅಡ್ಮಿನ್ ಮಾತ್ರ ಹಾಜರಿದ್ದರು.
ನನ್ನ ಮಗ ಗೌರವ ಹಾಳಾಗುತ್ತದೆ ಎಂದು ಹೆದರಿ ತನ್ನ ಜೀವನ ಅಂತ್ಯಗೊಳಿಸಿದ. ಪರೀಕ್ಷಾ ಹಾಲ್ ಒಳಗೆ ಮೊಬೈಲ್ ಕೊಂಡೊಯ್ಯುವುದು ತಪ್ಪು ಎಂದು ನಾನು ಒಪ್ಪುತ್ತೇನೆ, ಉದ್ದೇಶಪೂರ್ವಕವಾಗಿ ಮಾಡಿಲ್ಲದಿದ್ದರೂ ತಪ್ಪಾಗಿದೆ. ಆದರೆ, ಆತನು ಆತ್ಮಹತ್ಯೆಗೆ ಅವನು ಅರ್ಹನಾಗಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.