ಅಕ್ಟೋಬರ್ 3ರಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅವಘಡದಲ್ಲಿ 2 ವರ್ಷದ ಮಗು ಸೇರಿ ಇಬ್ಬರು ಮೃತಪಟ್ಟ ಘಟನೆ ಬೆಂಗಳೂರಿನ ಸೋಮಪುರ ಬಳಿಯ ನೈಸ್ ರಸ್ತೆಯಲ್ಲಿ ನಡೆದಿದೆ.
ಮೈಸೂರು ರಸ್ತೆ ಕಡೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುತಿದ್ದ ಕಾರಿನಲ್ಲಿ ಒಂದೇ ಕುಟುಂಬದ ಮಹೇಂದ್ರನ್, ಸಿಂಧು ಹಾಗೂ ಇಬ್ಬರು ಮಕ್ಕಳು ಇದ್ದರು. ಅಪಘಾತ ನಡೆದ ಸಂದರ್ಭದಲ್ಲಿ ಸಿಂಧು ಮತ್ತು ಎರಡು ವರ್ಷದ ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹೇಂದ್ರನ್ ಮತ್ತು ಇನ್ನೊಂದು ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೈಸೂರು ಕಡೆಯಿಂದ ಕನಕಪುರ ಕಡೆಗೆ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಮೋರಿಯ ಗೋಡೆಗೆ ಗುದ್ದಿದೆ. ಪರಿಣಾಮ ಟಾಟಾ ನೆಕ್ಸಾನ್ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಲಾರಿ ಸಹ ರಸ್ತೆ ಬದಿಗೆ ಪಲ್ಟಿಯಾಗಿದೆ. ಅ.3 ರಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಕಾರ್ ಪೂಲಿಂಗ್ ನಿಷೇಧಿಸಿಲ್ಲ, ಸುಳ್ಳು ಸುದ್ದಿ ಎಂದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
ಅಪಘಾತದ ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ತಲಘಟ್ಟಪುರ ಸಂಚಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಬಗ್ಗೆ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.