ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2ರಲ್ಲಿ ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆ ಆರಂಭವಾಗಿದೆ. ಇದೀಗ, ಕೆಐಎ ಆವರಣದೊಳಗೆ ಮೂರನೇ ಟರ್ಮಿನಲ್ 2030ರಲ್ಲಿ ಆರಂಭವಾಗಲಿದೆ ಎಂಬ ಸುದ್ದಿ ಕೇಳಿಬಂದಿದೆ.
ಬೆಂಗಳೂರು ಇಂಟರ್‌ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (ಬಿಐಎಎಲ್) ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸತ್ಯಕಿ ರಘುನಾಥ್ ಮಾತನಾಡಿ, “ಮಂಗಳವಾರ ಟರ್ಮಿನಲ್ 2ರಿಂದ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳು ಆರಂಭವಾಗಿವೆ. ಟರ್ಮಿನಲ್ 2ನ ಮೊದಲ ಹಂತವು ವಾರ್ಷಿಕವಾಗಿ 25 ಮಿಲಿಯನ್ ಪ್ರಯಾಣಿಕರನ್ನು ಪೂರೈಸುವ ನಿರೀಕ್ಷೆಯಿದೆ. ಅದರಲ್ಲಿ 10 ಮಿಲಿಯನ್ ಅಂತಾರಾಷ್ಟ್ರೀಯ ಪ್ರಯಾಣಿಕರು ಮತ್ತು ಉಳಿದವರು ದೇಶೀಯ ಪ್ರಯಾಣಿಕರಾಗಿದ್ದಾರೆ” ಎಂದು ಹೇಳಿದರು.
“ಕೆಐಎ ಪ್ರಸ್ತುತ ವಾರ್ಷಿಕವಾಗಿ 35 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುತ್ತದೆ. ಟರ್ಮಿನಲ್ 2 ರಲ್ಲಿ ಈ ಅಂಕಿ ಅಂಶವನ್ನು 25 ಮಿಲಿಯನ್‌ಗೆ ಹೆಚ್ಚಿಸಲಾಗುವುದು. ಇದರಿಂದಾಗಿ ಒಟ್ಟಾರೆ ಸಾಮರ್ಥ್ಯ ವಾರ್ಷಿಕವಾಗಿ ಸುಮಾರು 60 ಮಿಲಿಯನ್ ಪ್ರಯಾಣಿಕರಿಗೆ ಏರಿಕೆಯಾಗುತ್ತದೆ” ಎಂದು ಅವರು ತಿಳಿಸಿದರು.
“ಪ್ರತಿದಿನ ಸರಾಸರಿ 1 ಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸುತ್ತಾರೆ. ಅವರಲ್ಲಿ ಸುಮಾರು 15,000 ಅಂತಾರಾಷ್ಟ್ರೀಯ ಪ್ರಯಾಣಿಕರು ಇದ್ದಾರೆ. ಈಗ ಹೊಸ ಟರ್ಮಿನಲ್ ಅಂತಾರಾಷ್ಟ್ರೀಯ ವಿಮಾನಗಳಿಗೆ ಕ್ರಿಯಾತ್ಮಕವಾಗಿರುವುದರಿಂದ ಅಂತಾರಾಷ್ಟ್ರೀಯ ಸಂಚಾರ ದಟ್ಟಣೆ ಹೆಚ್ಚಾಗುವ ನಿರೀಕ್ಷೆಯಿದೆ” ಎಂದರು.
“ಟರ್ಮಿನಲ್ 1 ಅನ್ನು ಶೀಘ್ರದಲ್ಲೇ ನವೀಕರಿಸಲಾಗುವುದು. ಇಂಡಿಗೋ, ಆಕಾಶ ಏರ್, ಅಲಯನ್ಸ್ ಏರ್ ಮತ್ತು ಸ್ಪೈಸ್ ಜೆಟ್‌ಗಳು ಟರ್ಮಿನಲ್ 1ರಿಂದ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದರೆ, ಏರ್ ಏಷ್ಯಾ, ಏರ್ ಇಂಡಿಯಾ, ಸ್ಟಾರ್ ಏರ್ ಮತ್ತು ವಿಸ್ತಾರಾದ ದೇಶೀಯ ಕಾರ್ಯಾಚರಣೆಗಳು ಟರ್ಮಿನಲ್ 2ರಿಂದ ಕಾರ್ಯ ನಿರ್ವಹಿಸುತ್ತದೆ. ಪ್ರಸ್ತುತ 27 ವಿಮಾನಯಾನ ಸಂಸ್ಥೆಗಳು ಟರ್ಮಿನಲ್ 2ನಿಂದ ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ 25 ಅಂತಾರಾಷ್ಟ್ರೀಯ ಮತ್ತು 2 ದೇಶೀಯ ವಿಮಾನಯಾನ ಸಂಸ್ಥೆಗಳು 33 ಗಮ್ಯಸ್ಥಾನಗಳನ್ನು ಒಳಗೊಂಡಿರುತ್ತವೆ” ಎಂದರು.
ಈ ಸುದ್ದಿ ಓದಿದ್ದೀರಾ? ಸಚಿವ ಡಿ.ಸುಧಾಕರ್ ವಜಾಗೆ ಮುಖ್ಯಮಂತ್ರಿ ಚಂದ್ರು ಆಗ್ರಹ
ಟರ್ಮಿನಲ್ 2ನಿಂದ ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆ ಆರಂಭ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2ರಲ್ಲಿ ಸೆ. 12ರಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟ ಆರಂಭವಾಗಿದೆ. ಮಂಗಳವಾರ ಬೆಳಗ್ಗೆ 10.05ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ಗೆ ಸೌದಿಯಾ ಏರ್‌ಲೈನ್ಸ್ ಅಂತಾರಾಷ್ಟ್ರೀಯ ವಿಮಾನ ಲ್ಯಾಂಡಿಂಗ್ ಆಗಿದೆ.
ಜೆಡ್ಡಾದಿಂದ (SV 866) ಸೌದಿಯಾ ಏರ್‌ಲೈನ್ಸ್ ವಿಮಾನದಲ್ಲಿ ಒಟ್ಟು 212 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವಿಮಾನ ನಿಗದಿತ ಆಗಮನಕ್ಕೆ ಹತ್ತು ನಿಮಿಷಗಳ ಮೊದಲು ನ್ಯೂ ಸೌತ್ ಪ್ಯಾರಲಲ್ ರನ್‌ವೇಯಲ್ಲಿ ಸುರಕ್ಷಿತವಾಗಿ ಬಂದಿಳಿಯಿತು.
ಜೆಡ್ಡಾ (SV 867) ವಿಮಾನದ ಹಿಂದಿರುಗುವ ಪ್ರಯಾಣವು ಟರ್ಮಿನಲ್ 2 ನಿಂದ 11.50ಕ್ಕೆ ಹೊರಟಿತು. ಟರ್ಮಿನಲ್ 2 ರಿಂದ ಅಂತಾರಾಷ್ಟ್ರೀಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆ ಇಂಡಿಗೋ (6E 1167) ಆಗಿದ್ದು, ಇದು 130 ಪ್ರಯಾಣಿಕರೊಂದಿಗೆ ಅದೇ ರನ್ ವೇಯಿಂದ ಕೊಲಂಬೊಕ್ಕೆ ಮಧ್ಯಾಹ್ನ 12.10 ಕ್ಕೆ ಟೇಕ್ ಆಫ್ ಆಗಿತ್ತು.
ಡೊಳ್ಳು ಕುಣಿತ ಮತ್ತು ಯಕ್ಷಗಾನ ಕಲಾವಿದರೊಂದಿಗೆ ಭವ್ಯವಾದ ಮನರಂಜನಾ ಕಾರ್ಯಕ್ರಮವನ್ನು ‘ಆಗಮನ’ ಗೇಟ್ ಒಂದರ ಹೊರಗೆ ಟರ್ಮಿನಲ್ 2ನ ಮೊದಲ ಬ್ಯಾಚ್ ಅಂತಾರಾಷ್ಟ್ರೀಯ ಫ್ಲೈಯರ್‌ಗಳನ್ನು ಸ್ವಾಗತಿಸಲಾಯಿತು. ಇದಕ್ಕೂ ಮೊದಲು ವಿಮಾನ ನಿಲ್ದಾಣದ ಅಧಿಕಾರಿಗಳು ಇಂಡಿಗೋ ಸಿಬ್ಬಂದಿ ಮತ್ತು ಸೌದಿಯಾ ಏರ್‌ಲೈನ್ ಸಿಬ್ಬಂದಿಯೊಂದಿಗೆ ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿದರು.
International operations take off from Terminal 2 (T2), BLR Airport today. The official lamp-lighting ceremony with @Saudi_Airlines and @IndiGo6E, the opening of Bengaluru Duty-Free (International), and live performances marked the celebrations.
— BLR Airport (@BLRAirport) September 12, 2023
Click here for Frequently Asked… pic.twitter.com/9qB00hrViP
ಬಿಐಎಎಲ್ ಎಂಡಿ ಮತ್ತು ಸಿಇಒ ಹರಿ ಮರಾರ್, “ಟರ್ಮಿನಲ್ 2ರಲ್ಲಿ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳು ಪ್ರಾರಂಭವಾದವು. ಇದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಮುಖ ಮೈಲಿಗಲ್ಲು ಪ್ರತಿನಿಧಿಸುತ್ತದೆ. ಈ ಕ್ರಮದೊಂದಿಗೆ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳು ಟರ್ಮಿನಲ್ 2ಗೆ ಪ್ರತ್ಯೇಕವಾಗಿರುತ್ತವೆ. ಬೆಂಗಳೂರಿನ ಸಂಪರ್ಕವನ್ನು ಬಲಪಡಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದರು.