- ಕಲುಷಿತ ನೀರು ಕುಡಿದು ಅಸ್ವಸ್ಥರಾದ ಮೈಕಲ್ ಪಾಳ್ಯದ ನಿವಾಸಿಗಳು
- ಅಶುದ್ಧ ನೀರಿನ ಸೋರಿಕೆ ಗಮನಿಸಿ, ಸಮಸ್ಯೆ ಪರಿಹರಿಸಲಾಗಿದೆ ಎಂದ ಅಧಿಕಾರಿಗಳು
ರಾಜ್ಯ ರಾಜಧಾನಿ ಬೆಂಗಳೂರಿನ ಮೈಕಲ್ ಪಾಳ್ಯದ 1 ಮತ್ತು 5ನೇ ಕ್ರಾಸ್‌ನಲ್ಲಿರುವ ಸುಮಾರು 150-200 ಮನೆಗಳು ಕಲುಷಿತ ನೀರು ಪೂರೈಕೆಯಿಂದ ತೊಂದರೆ ಅನುಭವಿಸುತ್ತಿವೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ನಿವಾಸಿಗಳಿಗೆ ನೀರು ಸರಬರಾಜು ಮಾಡುತ್ತಿರುವ ಕಾವೇರಿ ನೀರು ಮಾರ್ಚ್ 18 ರಿಂದ ದುರ್ವಾಸನೆ ಬೀರುತ್ತಿದೆ. ಜನರು ಶುದ್ಧ ನೀರಿಗಾಗಿ ಪರದಾಡುತ್ತಿದ್ದಾರೆ.
“ಬಿಡಬ್ಲ್ಯೂಎಸ್‌ಎಸ್‌ಬಿ ಜತೆಗೆ ಈಗಾಗಲೇ ಹಲವಾರು ಬಾರಿ ಸಮಸ್ಯೆ ಹೇಳಿಕೊಂಡರು ಅಧಿಕಾರಿಗಳು ಬಂದು ಸಮಸ್ಯೆ ಸರಿಯಾಗಿದೆ ಎಂದು ಹೇಳಿದ ಮೂರು ದಿನಕ್ಕೆ ಮತ್ತೆ ಅದೇ ಪರಿಸ್ಥಿತಿ ಎದುರಾಗುತ್ತಿದೆ. ಸೋಮವಾರ ಸಾಯಂಕಾಲದಿಂದ ಅಶುದ್ಧ ನೀರು ಬರುವುದು ನಿಲ್ಲುತ್ತದೆ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ಹೇಳಿದ್ದಾರೆ. ಆದರೂ, ನಿವಾಸಿಗಳು ಜಾಗರೂಕರಾಗಿದ್ದಾರೆ. ನಲ್ಲಿಗಳಿಂದ ಶುದ್ಧ ನೀರು ಹರಿಯುತ್ತಿದ್ದರೂ, ಹಿಂದಿನ ಇಂತಹ ಪರಿಹಾರಗಳು ಹೆಚ್ಚು ಕಾಲ ಉಳಿಯಲಿಲ್ಲ. ಹಾಗಾಗಿ, ಈಗಲಾದರೂ ಶಾಶ್ವತವಾಗಿ ಸಮಸ್ಯೆ ಬಗೆಹರಿಯಬಹುದು ಎಂಬ ಆಶಯ ಹೊಂದಿದ್ದೇವೆ” ಎನ್ನುತ್ತಾರೆ ಮೈಕಲ್ ಪಾಳ್ಯದ ನಿವಾಸಿಗಳು.
“ಬಿಡಬ್ಲ್ಯೂಎಸ್‌ಎಸ್‌ಬಿ ಸಿಬ್ಬಂದಿ ಪ್ರದೇಶದಲ್ಲಿನ ಪೈಪ್‌ಲೈನ್‌ನಿಂದ ನೀರನ್ನು ಹೊರಹಾಕುತ್ತಿದ್ದಾರೆ. ಅಶುದ್ಧ ನೀರಿನ ಸೋರಿಕೆಯನ್ನು ಗಮನಿಸಲಾಗಿದೆ. ಸಮಸ್ಯೆಯನ್ನು ಪರಿಹರಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ತಿಂಗಳ ಪ್ರಯೋಗದ ನಂತರ ಅಶುದ್ಧ ನೀರು ಸೋರಿಕೆಯಾಗುತ್ತಿರುವ ಪೈಪ್‌ಲೈನ್ ಅನ್ನು ಮುಚ್ಚಲು ನಿರ್ಧರಿಸಿದ್ದೇವೆ. ಈ ಭಾಗದಲ್ಲಿ ಎರಡು ಪೈಪ್‌ಲೈನ್‌ಗಳು ಚಾಲನೆಯಲ್ಲಿವೆ. ಎಲ್ಲ ಲೈನ್‌ಗಳು ನೆಲದಡಿಯಲ್ಲಿ ಪರಸ್ಪರ ಸಂಪರ್ಕ ಹೊಂದಿರುವುದರಿಂದ ಡ್ರೈನ್‌ಪೈಪ್‌ನಿಂದ ಒಳಚರಂಡಿ ಹಳೆಯ ಪೈಪ್‌ಲೈನ್‌ಗೆ ಸೋರಿಕೆಯಾಗಿದೆ ಎಂದು ಶಂಕಿಸಲಾಗಿದೆ. ಹಾಗಾಗಿ, ವಾಲ್ವ್ ಅನ್ನು ಮುಚ್ಚಿದ್ದೇವೆ. ಹೊಸ ಪೈಪ್‌ಲೈನ್ ಮೂಲಕ ಮಾತ್ರ ಮೈಕೆಲ್ ಪಾಳ್ಯಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು” ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಧನ್ವಂತ್ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿಯ ಇಂದಿರಾನಗರ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ಬಸವರಾಜ್ ಹೇಳಿದರು.
“ನಿತ್ಯ ಸಂಜೆ 4:30ರಿಂದ ಕಲುಷಿತ ನೀರು ಹರಿಯಲು ಪ್ರಾರಂಭಿಸುತ್ತದೆ. ಹೀಗಾಗಿ, ನಾವು ನಲ್ಲಿಯ ಟ್ಯಾಪ್ ಅನ್ನು ತೆರೆಯುವುದಿಲ್ಲ. ಏಕೆಂದರೆ, ಒಮ್ಮೆ ಸಂಪ್‌ಗಳಿಗೆ ಒಳಚರಂಡಿ ನೀರು ಸಂಗ್ರಹಣೆ ಆದರೆ, ಮತ್ತೆ ನಾವು ಅವುಗಳನ್ನು ಸ್ವಚ್ಛಗೊಳಿಸಬೇಕಾಗುತ್ತದೆ. ಈಗಾಗಲೇ ಕಳೆದ ತಿಂಗಳುಗಳಲ್ಲಿ ಟ್ಯಾಂಕ್ ಮತ್ತು ಸಂಪ್ ಅನ್ನು 6-7 ಬಾರಿ ಸ್ವಚ್ಛಗೊಳಿಸಿದ್ದೇವೆ. ಪ್ರತಿ ಬಾರಿ ₹1,500 ಬೇಕಾಗುತ್ತದೆ” ಎಂದು ನಿವಾಸಿ ಪಿಜೆ ಅಲೆಕ್ಸಾಂಡರ್ ಹೇಳಿದರು.
“ಸುಮಾರು 30-40 ನಿವಾಸಿಗಳು ಕಲುಷಿತ ನೀರು ಸೇವಿಸಿದ ನಂತರ ಅಸ್ವಸ್ಥರಾಗಿದ್ದಾರೆ. 15ಕ್ಕೂ ಹೆಚ್ಚು ಜನರು ಮಾರ್ಚ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ನನ್ನ ನೆರೆಹೊರೆಯವರ ಮಗಳು ಮತ್ತು ವಯಸ್ಸಾದ ತಾಯಿ ಅತಿಸಾರದಂತಹ ಪರಿಸ್ಥಿತಿಗಳಿಂದಾಗಿ 4-5 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು” ಎಂದರು.
ಈ ಸುದ್ದಿ ಓದಿದ್ದೀರಾ? ಮುಂಗಾರು ಮಳೆಯಿಂದಾಗುವ ಸಮಸ್ಯೆ ನಿಭಾಯಿಸಲು ಸಂಪೂರ್ಣ ಸನ್ನದ್ಧ : ತುಷಾರ್ ಗಿರಿನಾಥ್
“ಈ ಕಲುಷಿತ ನೀರು ಕುಡಿದು ಹಲವಾರು ಜನ ಆಸ್ಪತ್ರೆ ಸೇರಿದ್ದಾರೆ. ಇಂತಹ ನೀರಿನ ಪೂರೈಕೆಯಿಂದಾಗಿ ಚಿಕಿತ್ಸೆಗಾಗಿ ಪ್ರತಿ ರೋಗಿಗೆ ಸರಾಸರಿ ₹15,000 ವೆಚ್ಚವಾಗಿದೆ” ಎಂದು ಇನ್ನೊಬ್ಬ ನಿವಾಸಿ ಅನಂತರಾಮನ್ ಹೇಳಿದರು.
“ಕಳೆದ ನಾಲ್ಕು ತಿಂಗಳುಗಳಲ್ಲಿ ಹಲವಾರು ಬಾರಿ ಸಮಸ್ಯೆ ಪರಿಹರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಶೀಘ್ರದಲ್ಲೇ ಸಮಸ್ಯೆ ಮರುಕಳಿಸುತ್ತದೆ. ಈ ಬಾರಿಯಾದರೂ ಸಮಸ್ಯೆ ಬಗೆಹರಿದಿದೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು” ಎಂದು ಸ್ಥಳೀಯ ನಿವಾಸಿ ಡಿ ಶೇಖರ್ ಹೇಳಿದರು.