- ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬೆಡ್ ಇಲ್ಲವೆಂಬ ಕಾರಣ ನೀಡಿ ವೈದ್ಯರು ಚಿಕಿತ್ಸೆ ನಿರಾಕರಿಸಿದ್ದರು
- ಆಸ್ಪತ್ರೆಯ ಶುಲ್ಕ ಪಾವತಿಸಿದ ವಿಲ್ಸನ್ ಗಾರ್ಡನ್ ಸಂಚಾರ ಠಾಣೆಯ ಸಿಬ್ಬಂದಿ ಪ್ರಸನ್ನಕುಮಾರ್
ಬೈಕ್ ಡಿಕ್ಕಿ ಹೊಡೆದು ಆಸ್ಪತ್ರೆ ಸೇರಿದ್ದ ವೃದ್ಧ ಮೃತಪಟ್ಟಿದ್ದು, ನಿಮ್ಹಾನ್ಸ್ ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣೇಶ್(60) ಸಾವನ್ನಪ್ಪಿದ ವ್ಯಕ್ತಿ. ಇವರು ಮೂಲತಃ ಬಳ್ಳಾರಿಯವರು. ಮೇ 1ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುವಾಗ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದರು. ಈ ಘಟನೆ ಬೆಂಗಳೂರಿನ ಅಶೋಕ ಪಿಲ್ಲರ್ ಬಳಿ ನಡೆದಿದೆ.
ಅಸ್ವಸ್ಥರಾದ ಇವರನ್ನು ಕುಟುಂಬಸ್ಥರು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲು ತೆರಳಿದ್ದರು. ಆದರೆ, ಆ ಆಸ್ಪತ್ರೆಯಲ್ಲಿ ಬೆಡ್ ಇಲ್ಲವೆಂಬ ಕಾರಣ ನೀಡಿ ವೈದ್ಯರು ಚಿಕಿತ್ಸೆ ನಿರಾಕರಿಸಿದ್ದರು. ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಗಣೇಶ್ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬೈಕ್ನಲ್ಲಿದ್ದ ಇಬ್ಬರು ಸವಾರರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಾಡಹಗಲೇ ಕಾರು ಅಡ್ಡಗಟ್ಟಿ ದರೋಡೆಗೆ ಯತ್ನ; ಟ್ವೀಟ್‌ನಲ್ಲಿ ಘಟನೆ ವಿವರಿಸಿದ ವ್ಯಕ್ತಿ!
ಗಣೇಶ್ ಅವರಿಗೆ ಅಪಘಾತ ಸಂಭವಿಸಿದ ಸಮಯದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲು 108ಗೆ ಕರೆ ಮಾಡಲಾಗಿದೆ. ಆದರೆ, ಯಾವುದೇ ಸ್ಪಂದನೆ ಸಿಗದ ಕಾರಣ 3 ಗಂಟೆಗಳ ಬಳಿಕ ಖಾಸಗಿ ಆಂಬುಲೆನ್ಸ್‌ನಲ್ಲಿ ಗಾಯಾಳುವನ್ನು ಕರೆದುಕೊಂಡು ಹೋಗಲಾಯಿತು. ಆದರೆ, ನಿಮ್ಹಾನ್ಸ್‌ನಲ್ಲಿ ವೈದ್ಯರು ಪರಿಸ್ಥಿತಿ ನೋಡಿ ಗಾಯಾಳುವನ್ನು ಅಡ್ಮಿಟ್ ಮಾಡಿಕೊಳ್ಳದೇ, ಬೆಡ್ ಇಲ್ಲವೆಂದು ಕಾರಣ ನೀಡಿ, ಚಿಕಿತ್ಸೆ ನೀಡಿಲ್ಲ. ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ನೀಡಿದ್ದರೆ ಗಣೇಶ್ ಬದುಕುಳಿಯುತ್ತಿದ್ದರು ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಗಣೇಶ್ ಕೊನೆಯುಸಿರೆಳೆದಿದ್ದಾರೆ. ಖಾಸಗಿ ಆಸ್ಪತ್ರೆಯ ಬಿಲ್ ₹12,000 ಕಟ್ಟುವಂತೆ ಸಿಬ್ಬಂದಿ ತಿಳಿಸಿದ್ದಾರೆ. ಮೃತಪಟ್ಟ ವೃದ್ಧ ಗಣೇಶ್ ಕುಟುಂಬದ ಬಳಿ ಹಣವಿಲ್ಲದೆ ಪರದಾಡಿದ್ದಾರೆ. ಈ ವೇಳೆ, ವಿಲ್ಸನ್ ಗಾರ್ಡನ್ ಸಂಚಾರ ಠಾಣೆಯ ಸಿಬ್ಬಂದಿ ಪ್ರಸನ್ನಕುಮಾರ್ ಎಂಬುವವರು ಆಸ್ಪತ್ರೆಯ ಶುಲ್ಕವನ್ನು ಪಾವತಿಸಿದ್ದಾರೆ.