- ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಂತ್ರಸ್ತೆಯ ತಾಯಿ
- ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಆರೋಪಿ
ಮನೆಯಲ್ಲಿ ಒಬ್ಬಂಟಿಯಾಗಿದ್ದ ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಕಾಮುಕನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಇಬ್ರಾಹಿಂ ಬಾಷಾ ಬಂಧಿತ ವ್ಯಕ್ತಿ. ಈತನು ಮೂಲತಃ ತಮಿಳುನಾಡಿನವನು. ನಗರದ ಕೊಟ್ಟಿಗೆಪಾಳ್ಯ ಸಮೀಪದ ಶ್ರೀಗಂಧ ಕಾವಲುನಲ್ಲಿ ನೆಲೆಸಿದ್ದನು. ‘ಡಿ’ ಗ್ರೂಪ್ ಲೇಔಟ್ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಈತ ಗಾರೆ ಕೆಲಸ ಮಾಡುತ್ತಿದ್ದನು.
ಸಂತ್ರಸ್ತೆ ಆಕೆಯ ತಾಯಿಯ ಜತೆಗೆ ಕೊಟ್ಟಿಗೆಪಾಳ್ಯ ಸಮೀಪ ನೆಲೆಸಿದ್ದಳು. ಆಕೆಯ ತಾಯಿ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೆಲಸಕ್ಕೆ ತೆರಳುವಾಗ ಮಗಳನ್ನು ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ತಾಯಿ ಕೆಲಸಕ್ಕೆ ಹೋಗುತ್ತಿದ್ದರು. ಬಿಡುವಿನ ಸಮಯದಲ್ಲಿ ಮನೆಗೆ ಬಂದು ಮಗಳನ್ನು ನೋಡಿಕೊಂಡು ಹೋಗುತ್ತಿದ್ದರು.
ಆರೋಪಿಯೂ ಅದೇ ಪ್ರದೇಶದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದನು. ಯುವತಿಯನ್ನು ನೋಡಿದ್ದನು. ಜೂನ್ 22ರಂದು ಎಂದಿನಂತೆ ತಾಯಿ ಮಗಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ತೆರಳಿದ್ದ ವೇಳೆ, ಯುವತಿ ಒಬ್ಬಳೇ ಇರುವುದನ್ನು ಗಮನಿಸಿದ ಆರೋಪಿಯು ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು.
ಈ ಸುದ್ದಿ ಓದಿದ್ದೀರಾ? 500 ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದ ತಹಶೀಲ್ದಾರ್ ಅಜಿತ್ ರೈ 7 ದಿನ ಪೊಲೀಸ್ ವಶಕ್ಕೆ
ಈ ವೇಳೆ, ಸಂತ್ರಸ್ತೆ ಬಲವಾಗಿ ವಿರೋಧಿಸಿದ್ದಾಳೆ. ಕೋಪದಿಂದ ಯುವತಿ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿಯಾಗಿದ್ದನು. ಕೆಲ ಹೊತ್ತಿನ ಬಳಿಕ ಮನೆಗೆ ಮರಳಿದ ತಾಯಿ ಬಳಿ ಸಂತ್ರಸ್ತೆ ನೋವು ತೋಡಿಕೊಂಡಿದ್ದಳು.
ಈ ಬಗ್ಗೆ ಸಂತ್ರಸ್ತೆ ತಾಯಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.