- ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
- ವಿದ್ಯುತ್ ಮೀಟರ್ ರೀಡ್ ಮಾಡಿ ಬಿಲ್ ನೀಡುವಾಗ ನಡೆದ ಘಟನೆ
ಕಳೆದ ಬಾರಿಗಿಂತ ಈ ತಿಂಗಳು ವಿದ್ಯುತ್ ದರ ಹೆಚ್ಚಳ ಬಂದ ಹಿನ್ನೆಲೆ, ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ಕಾಂ)ದ ಮೀಟರ್ ರೀಡರ್ ಸಿಬ್ಬಂದಿಯೊಬ್ಬರನ್ನು ಥಳಿಸಿರುವ ಘಟನೆ ಬೆಂಗಳೂರಿನ ಗೋವಿಂದಪುರದಲ್ಲಿ ನಡೆದಿದೆ.
ಬೆಸ್ಕಾಂ ಸಿಬ್ಬಂದಿ ನಾಗರಾಜ್ ನಾಯಕ್ ಎಂಬವರ ಮೇಲೆ ಶಂಶಾದ್ ಖಾನ್ ಎಂಬಾತ ಹಲ್ಲೆ ಮಾಡಿದ್ದಾರೆ. ಎಂದಿನಂತೆ ನಾಗರಾಜ್ ಅವರು ಮೀಟರ್ ರೀಡಿಂಗ್ ಮಾಡಿ ವಿದ್ಯುತ್ ಬಿಲ್ ನೀಡುವ ಕೆಲಸದಲ್ಲಿ ತೊಡಗಿದ್ದರು. ಆ.4 ರಂದು ಬೆಳಿಗ್ಗೆ 11:30ರ ಸುಮಾರಿಗೆ ಬೆಂಗಳೂರಿನ ಗೋವಿಂದಪುರದ 16ನೇ ಕ್ರಾಸ್ನಲ್ಲಿರುವ ಶಂಶಾದ್ ಖಾನ್ ಎಂಬುವವರ ಮನೆಯ ವಿದ್ಯುತ್ ಮೀಟರ್ ರೀಡಿಂಗ್ ಮಾಡಿ ₹458 ಬಾಕಿ ಬಿಲ್ ಸೇರಿದಂತೆ ಒಟ್ಟು ₹4,026 ಬಿಲ್ ನೀಡಿದ್ದಾರೆ.
ಇದಕ್ಕೆ ಕೋಪಗೊಂಡ ಶಂಶಾದ್ ಖಾನ್ ಕಳೆದ ಬಾರಿಗಿಂತ ಈ ಬಾರಿ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಮೊತ್ತದ ಬಿಲ್ ಬಂದಿದೆ ಎಂದು ಸಿಬ್ಬಂದಿ ಜತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಅವರ ಜತೆಗೆ ನಾಗರಾಜ್ ಜಗಳ ಮುಂದುವರೆಸದೆ ಮುಂದಿನ ಮನೆಗಳಿಗೆ ಬಿಲ್ ನೀಡಲು ತೆರಳಿದ್ದಾರೆ. ಅವರನ್ನೇ ಹಿಂಬಾಲಿಸಿಕೊಂಡ ಬಂದ ಶಂಶಾದ್ ಖಾನ್ ಪದೇಪದೆ ಜಗಳಕ್ಕೆ ಇಳಿದಿದ್ದಾರೆ.
ಮೀಟರ್ ರೀಡಿಂಗ್ ಆಧರಿಸಿಯೇ ಬಿಲ್ ನೀಡಿದ್ದೇನೆ. ಬೆಸ್ಕಾಂ ಕಚೇರಿಗೆ ಭೇಟಿ ನೀಡುವಂತೆ ಶಂಶಾದ್ ಕಾನ್ ಅವರಿಗೆ ಸಲಹೆ ನೀಡಿದ್ದಾರೆ. ಆದರೂ ಕೇಳದ ಶಂಶಾದ್ ಖಾನ್ ನಾಗರಾಜ್ ಅವರ ಮುಖಕ್ಕೆ ನಾಲ್ಕೈದು ಬಾರಿ ಗುದ್ದಿದ್ದಾರೆ. ಇದರಿಂದ ನಾಗರಾಜ್ ಅವರ ಒಂದು ಹಲ್ಲು ಮುರಿದಿದೆ.
ನಾಗರಾಜ್ ನಾಯಕ್ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ನಾಗರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಡ್ಯೂಟಿ ನೀಡದ್ದಕ್ಕೆ ಬಿಎಂಟಿಸಿ ಬಸ್ ಡಿಪೋ ಮುಂದೆಯೇ ಚಾಲಕ ಆತ್ಮಹತ್ಯೆ
ಗೋವಿಂದಪುರ ಪೊಲೀಸ್ ಠಾಣೆಗೆ ನಾಗರಾಜ್ ನಾಯಕ್ ಅವರು ದೂರು ನೀಡಿದ್ದು, ಪೊಲೀಸರು ಶಂಶಾದ್ ಖಾನ್ಅವರನ್ನು ಬಂಧಿಸಿ ಠಾಣಾ ಜಾಮೀನು ನೀಡಿ ಬಿಡುಗಡೆ ಮಾಡಿದ್ದಾರೆ.
“300ಕ್ಕೂ ಹೆಚ್ಚು ಯೂನಿಟ್ ವಿದ್ಯುತ್ ಅನ್ನು ಶಂಶಾದ್ ಖಾನ್ ಅವರು ಬಳಸಿದ್ದರಿಂದ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ಗೆ ಅರ್ಹರಲ್ಲ” ಎಂದು ನಾಗರಾಜ್ ನಾಯಕ್ ತಿಳಿಸಿದ್ದಾರೆ.