- 10-15 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ₹1.40 ಲಕ್ಷ ಮೌಲ್ಯದ ಸೈಡ್ ಕರ್ಟನ್ ಮತ್ತು ಸೀಟ್ ಬೆಲ್ಟ್ ಹಾನಿ
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ 5ನೇ ಮುಖ್ಯರಸ್ತೆಯಲ್ಲಿರುವ ರ‍್ಯಾಪಿಡೋ ಕಚೇರಿ ಎದುರು ನಿಲ್ಲಿಸಿದ್ದ 50 ರ‍್ಯಾಪಿಡೋ ಆಟೋಗಳ ಮೇಲೆ ಸಾರಥಿ ಆಟೋ ಚಾಲಕರು ದಾಳಿ ನಡೆಸಿದ್ದು, ಈ ಸಂಬಂಧ 10-15 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರಥಿ ಆಟೋ ಚಾಲಕರು ಏಕಾಏಕಿ ದಾಳಿ ನಡೆಸಿ 50 ರ‍್ಯಾಪಿಡೋ ಆಟೋಗಳನ್ನು ಹಾನಿಗೊಳಿಸಿ, ಚಾಲಕರಿಗೆ ವಿತರಣೆ ಮಾಡಲು ತಂದಿದ್ದ ಸೀಟ್ ಬೆಲ್ಟ್ ಹಾಗೂ ಸೈಡ್ ಕರ್ಟನ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಕದ್ದಿದ್ದಾರೆ ಎಂದು ರ‍್ಯಾಪಿಡೋ ಸಂಸ್ಥೆಯವರು ದೂರು ನೀಡಿದ್ದಾರೆ.
“ಜುಲೈ 18 ರಂದು ಮಧ್ಯಾಹ್ನ 12.30 ರ ಸುಮಾರಿಗೆ ಎಚ್‌ಎಸ್‌ಆರ್ ಲೇಔಟ್‌ನ ರ‍್ಯಾಪಿಡೋ ಕಚೇರಿ ಎದುರು ರ‍್ಯಾಪಿಡೋ ಆಟೋ ಚಾಲಕರಿಗೆ ಸೀಟ್‌ಬೆಲ್ಟ್ ಹಾಗೂ ಸೈಡ್ ಕರ್ಟನ್‌ಗಳನ್ನು ಸಂಸ್ಥೆ ನೀಡುತ್ತಿತ್ತು. ಈ ವೇಳೆ, ಏಕಾಏಕಿ ಬಂದ ಗುಂಪೊಂದು ಕಚೇರಿ ಎದುರು ನಿಂತು ಸಿಬ್ಬಂದಿಯೊಡನೆ ವಾಗ್ವಾದ ನಡೆಸಿತು. ಕಂಪನಿಯ ಪರವಾನಗಿ ಮಂಜೂರಾತಿಗಳನ್ನು ತೋರಿಸುವಂತೆ ಒತ್ತಾಯಿಸಿದೆ. ರ‍್ಯಾಪಿಡೋ ಆಟೋ ಚಾಲಕರಿಗೆ ನೀಡುತ್ತಿದ್ದ ₹1.40 ಲಕ್ಷ ಮೌಲ್ಯದ ಸೈಡ್ ಕರ್ಟನ್ ಮತ್ತು ಸೀಟ್ ಬೆಲ್ಟ್‌ಗಳನ್ನು ತೆಗೆದು ಹಾಕಿ, ಹಾನಿ ಮಾಡಿದ್ದಾರೆ. ಕೆಲವು ವಸ್ತುಗಳನ್ನು ಕಳುವು ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರ‍್ಯಾಪಿಡೋ ಸಿಬ್ಬಂದಿ ಎಂ ರೆಡ್ಡಿ ಪ್ರಸಾದ್ ನೀಡಿದ ದೂರಿನ ಆಧಾರದ ಮೇಲೆ, ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಕಳ್ಳತನ, ಕಿಡಿಗೇಡಿತನ, ಶಾಂತಿ ಭಂಗ, ಕ್ರಿಮಿನಲ್ ಬೆದರಿಕೆ ಹಾಗೂ ಉದ್ದೇಶಪೂರ್ವಕ ಅವಮಾನಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು| ಲೋಕಾಯುಕ್ತ ತನಿಖೆಯಿಂದ ಯಲಹಂಕ ಸರ್ಕಾರಿ ಆಸ್ಪತ್ರೆಯ ಭ್ರಷ್ಟಾಚಾರ ಬಯಲು
“ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದು ಆಟೋ ಚಾಲಕರು ಮತ್ತು ರ‍್ಯಾಪಿಡೋ ನೌಕರರು ಸಲ್ಲಿಸಿದ ದೂರು ಮತ್ತು ಪ್ರತಿದೂರುಗಳ ಸರಣಿಯ ಭಾಗವಾಗಿದೆ” ಎಂದು ಎಚ್‌ಎಸ್‌ಆರ್ ಲೇಔಟ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
“ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಯಾವುದೇ ಪರವಾನಗಿಯನ್ನು ಹೊಂದಿಲ್ಲದ ಕಾರಣ ಕಾನೂನುಬಾಹಿರವಾಗಿದೆ. ರ‍್ಯಾಪಿಡೋ ನಮ್ಮ ಆದಾಯವನ್ನು ಕಿತ್ತುಕೊಳ್ಳುತ್ತಿದೆ” ಎಂದು ಆಟೋ ಚಾಲಕರು ಆರೋಪಿಸಿದ್ದಾರೆ.
ಹೈಕೋರ್ಟ್ ತಡೆಯಾಜ್ಞೆ ನೀಡಿದ ಕಾರಣ ರ‍್ಯಾಪಿಡೋ ಕಾರ್ಯನಿರ್ವಹಿಸುತ್ತಿದೆ.