ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದೆ. ನಗರದ ಬಾಗಲಗುಂಟೆಯ ರವೀಂದ್ರನಗರದಲ್ಲಿ ತಾಯಿ ಮತ್ತು ಮಗನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಸೆ. 5ರ ಸಂಜೆ ಘಟನೆ ನಡೆದಿದ್ದು, ಒಂದು ದಿನ ತಡವಾಗಿ ಬೆಳಕಿಗೆ ಬಂದಿದೆ. ತಾಯಿ ನವನೀತ(33), ಮಗ ಸೃಜನ್(11) ಕೊಲೆಯಾದವರು.
ಕೊಲೆಯಾದ ನವನೀತ ಮೂಲತಃ ಆಂಧ್ರಪ್ರದೇಶದವರು. ಇವರು ತಮ್ಮ 11 ವರ್ಷದ ಮಗನೊಂದಿಗೆ ಕಳೆದ ಮೂರು ವರ್ಷಗಳಿಂದ ನಗರದ ರವೀಂದ್ರನಗರದಲ್ಲಿ ವಾಸಿಸುತ್ತಿದ್ದರು. ಇವರು ಕೌಟುಂಬಿಕ ಸಮಸ್ಯೆಯನ್ನು ಎದುರಿಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಪತಿಯಿಂದ ದೂರವಾಗಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ನವನೀತ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದ್ದು, ಹನ್ನೊಂದು ವರ್ಷದ ಆಕೆಯ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಇಬ್ಬರ ಮೃತದೇಹಗಳು ಬೆಡ್ ಮೇಲೆ ಇದ್ದವು ಎನ್ನಲಾಗಿದೆ.
ಇನ್ನು ಘಟನೆ ವಿಷಯ ತಿಳಿದ ಬಾಗಲಗುಂಟೆ ಪೊಲೀಸರು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾದ ಬೆಂಗಳೂರು ನಗರ – ನಿಷ್ಕ್ರಿಯ ಪೊಲೀಸ್ ಇಲಾಖೆ
ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿ ಪತಿ ಚಂದ್ರುವೇ ಕೊಂದಿರಬಹುದು ಎಂದು ಮೃತ ನವನೀತ ಕುಟುಂಬಸ್ಥರು ಆರೋಪಿಸಿದ್ದಾರೆ.
ಕೊಲೆಯಾದ ಮಹಿಳೆಯ ಪತಿ ಚಂದ್ರು ಪತ್ನಿ ಹಾಗೂ ಮಗನನ್ನು ಕೊಂದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಗಲಗುಂಟೆ ಪೊಲೀಸರು ಪರಾರಿಯಾಗಿರುವ ಚಂದ್ರು ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಈ ಪ್ರಕರಣ ಭೇದಿಸಲು ಡಿಸಿಪಿ ಶಿವಪ್ರಕಾಶ್ ದೇವರಾಜ ಅವರು ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದಾರೆ.