ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ವಹಣೆ ಮಾಡುತ್ತಿರುವ ಉಳ್ಳಾಲ ಕೆರೆಯಲ್ಲಿ ಇತ್ತೀಚೆಗೆ ಮೀನುಗಳ ಮಾರಣಹೋಮ ನಡೆದಿದೆ. ಹಾಗಾಗಿ, ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಮೇಲ್ದರ್ಜೆಗೇರಿಸಿ ಕಾಮಗಾರಿ ಮುಗಿಯುವವರೆಗೆ ಈ ಕೆರೆಯಲ್ಲಿ ಮೀನುಗಾರಿಕೆ ನಡೆಸದಂತೆ ಮೀನುಗಾರಿಕೆ ಇಲಾಖೆಗೆ ಪತ್ರ ಕಳುಹಿಸಲಾಗುವುದು ಎಂದು ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್ ವಿಜಯ್‌ಕುಮಾರ್ ಹರಿದಾಸ್ ಹೇಳಿದರು.
“ಮಲ್ಲತ್ತಹಳ್ಳಿ ಕೆರೆಯಲ್ಲಿ ಡೌನ್‌ಸ್ಟ್ರೀಮ್ ಪೂರ್ಣಗೊಂಡಿದೆ. ಎಸ್‌ಟಿಪಿ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಒಂದು ಅಥವಾ ಎರಡು ವರ್ಷ ಬೇಕಾಗಲಿದ್ದು, ಮಳೆಯ ನೀರೇ ನೀರಿನ ಮೂಲವಾಗಿದೆ. ಕೆರೆಯಲ್ಲಿ ಕೊಳಚೆ ನೀರು ಇರುವ ಬಗ್ಗೆ ದೂರುಗಳು ಬಂದಿದ್ದವು. ಮಲ್ಲತ್ತಹಳ್ಳಿ ಕೆರೆ ಸಮೀಪದ 5 ಎಂಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿ ಮೇಲ್ದರ್ಜೆಗೇರಿಸಬೇಕು. ಅಲ್ಲಿಯವರೆಗೆ ಮುಂದಿನ ದಿನಗಳಲ್ಲಿ ಮಳೆಯಿಂದ ಕೆರೆ ತುಂಬಿದರೂ ಮೀನು ಕೃಷಿಗೆ ಅವಕಾಶ ನೀಡುವುದಿಲ್ಲ” ಎಂದು ತಿಳಿಸಿದರು.
“ಕೆರೆಗಳಲ್ಲಿ ಮೀನು ಕೃಷಿ ಮಾಡಲು ಗುತ್ತಿಗೆದಾರರಿಗೆ ಮೀನುಗಾರಿಕೆ ಇಲಾಖೆ ಪರವಾನಗಿ ನೀಡುತ್ತದೆ. ಈ ದಾಖಲೆಗಳ ಆಧಾರದ ಮೇಲೆ ಗುತ್ತಿಗೆದಾರರು ಬಿಬಿಎಂಪಿ ಕೆರೆಗಳ ಗುತ್ತಿಗೆಗೆ ಅರ್ಜಿ ಸಲ್ಲಿಸುತ್ತಾರೆ. ಕೆರೆ ತುಂಬುವವರೆಗೂ ಟೆಂಡರ್ ಕರೆಯುವುದಿಲ್ಲ” ಎಂದು ಹೇಳಿದರು.
ಬಿಡಬ್ಲ್ಯುಎಸ್‌ಎಸ್‌ಬಿ ತ್ಯಾಜ್ಯ ನೀರು ನಿರ್ವಹಣೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮುಯಿಜ್ ಅಹಮದ್ ಮಾತನಾಡಿ, “ಮಲ್ಲತ್ತಳ್ಳಿಯಲ್ಲಿರುವ 5 ಎಂಎಲ್‌ಡಿ ಎಸ್‌ಟಿಪಿಯನ್ನು 10 ಎಂಎಲ್‌ಡಿಗೆ ಮೇಲ್ದರ್ಜೆಗೇರಿಸುವುದಾಗಿ ಬಿಬಿಎಂಪಿಗೆ ಪತ್ರ ನೀಡಿದ್ದು, ಅದು ಪೂರ್ಣಗೊಂಡ ನಂತರ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ನೀರನ್ನು ಪರೀಕ್ಷಿಸಿ ನಂತರ ಉಳ್ಳಾಲ ಕೆರೆಗೆ ಬಿಡಲಾಗುವುದು” ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಉಪ ಪರಿಸರ ಅಧಿಕಾರಿ ನವೀನ್ ಅವರು ಭೇಟಿ ನೀಡಿ ಕೆರೆಯ ನೀರಿನ ಮಾದರಿ ಸಂಗ್ರಹಿಸಿದರು. ಅಲ್ಲದೆ ಕೆರೆಯಲ್ಲಿ ಹಾಗೇ ಸತ್ತು ತೇಲುತ್ತಿರುವ ಎಲ್ಲ ಮೀನುಗಳನ್ನು ತೆಗೆಯುವಂತೆ ಬಿಬಿಎಂಪಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ
”ಕೆರೆ 24.14 ಎಕರೆ ವಿಸ್ತೀರ್ಣ ಹೊಂದಿದ್ದು, ಶೇ. 95ರಷ್ಟು ಭಾಗ ಬತ್ತಿ ಹೋಗಿದೆ. ಜುಲೈನಿಂದ ಮುಂಗಾರು ವೈಫಲ್ಯ, ನೀರಿನ ಕೊರತೆಯಿಂದ ಕೆರೆ ಬತ್ತಿ ಹೋಗಿದೆ. ಕಡಿಮೆ ನೀರು ಮತ್ತು ಕರಗಿದ ಆಮ್ಲಜನಕದ ಮಟ್ಟ ಕುಸಿತವು ಸಾಮೂಹಿಕ ಮೀನುಗಳ ಸಾವಿಗೆ ಕಾರಣವಾಗುವ ಸಾಧ್ಯತೆಯಿದೆ. ಎಸ್‌ಟಿಪಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ ನಂತರ ಕೆರೆಯಲ್ಲಿ ಸದಾ ನೀರು ಇರುತ್ತದೆ. ಇಲ್ಲವಾದರೆ ಉತ್ತಮ ಮಳೆಗಾಗಿ ಕಾಯಬೇಕು” ಎಂದು ಹೇಳಿದರು.
ಈ ನಡುವೆ ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್ ಅಧ್ಯಕ್ಷ ಡಿ.ಎಸ್.ಗೌಡ ಮಾತನಾಡಿ, “ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬತ್ತಿ ಹೋಗಿರುವ ಕೆರೆಯ ಬೇಲಿಯ ಹೂಳು ತೆಗೆಯುವಂತೆ ಬಿಬಿಎಂಪಿಗೆ ಪತ್ರ ಬರೆದಿದ್ದೇನೆ” ಎಂದರು.