ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆ ನಡೆದರೂ ಅದಕ್ಕೆ ಸಂಬಂಧಿಸಿದಂತೆ ತತ್‌ಕ್ಷಣ ದೂರು ನೀಡಲು ಪೊಲೀಸ್ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಿತ್ತು. ಇದೀಗ, ಸಂಚಾರ ನಿಯಮದಲ್ಲಿ ಉಂಟಾಗುವ ಕುಂದುಕೊರತೆಗಳಿಗೂ 112ಗೆ ಕರೆ ಮಾಡಿ ದೂರು ನೀಡಬಹುದು.
ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ, “ಸಾರ್ವಜನಿಕರು ಟ್ರಾಫಿಕ್ ಸಂಬಂಧಿತ ಸಮಸ್ಯೆಗಳನ್ನು ಈಗ 112ಗೆ ಕರೆ ಮಾಡಿದರೆ ಸೇವೆಯ ಮೂಲಕ ಪರಿಹರಿಸಲಾಗುವುದು” ಎಂದು ತಿಳಿಸಿದ್ದಾರೆ.
“ಸಭೆಯಲ್ಲಿ ನಾಗರಿಕರೊಬ್ಬರು ಸೂಚಿಸಿದಂತೆ, ಈಗ ಸಂಚಾರ ವಿಭಾಗದ ಸಮಸ್ಯೆಗಳನ್ನು ಕೂಡ ನಮ್ಮ112 ಮೂಲಕ ದಾಖಲಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಅನುವು ಮಾಡಲಾಗಿದೆ. ಈ ರೀತಿಯ ಸಂಚಾರ ಸಮಸ್ಯೆಗಳನ್ನು ಹೊಯ್ಸಳ ಬದಲಾಗಿ ದ್ವಿಚಕ್ರ ವಾಹನ ಮೇಲಿನ ಸಂಚಾರ ವಿಭಾಗದ ಸಿಬ್ಬಂದಿ ನಿರ್ವಹಿಸಲಿದ್ದಾರೆ” ಎಂದು ಹೇಳಿದ್ದಾರೆ.
ಈ ಹಿಂದೆ ‘ಮಾಸಿಕ ಜನಸಂಪರ್ಕ’ದಲ್ಲಿ ಸಂಚಾರ ವಿಭಾಗದವರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಗಳಿಗೆ 112 ಸೇವೆಯನ್ನು ತೆರೆಯುವ ಆಲೋಚನೆಯನ್ನು ನಾಗರಿಕರೊಬ್ಬರು ಸೂಚಿಸಿದ್ದರು.