ಬೆಂಗಳೂರಿನ ರಾಜಾಜಿನಗರದ ಮೆಟ್ರೋ ನಿಲ್ದಾಣದ ಸಮೀಪ ಮಂಗಳವಾರ ಬೆಳ್ಳಂಬೆಳಗ್ಗೆ ರೀ ರೈಲ್ ಹಳಿ ತಪ್ಪಿದ ಕಾರಣ ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆಯಾದಾಗ ಅದನ್ನು ಸರಿಪಡಿಸಲು ರೀ ರೈಲ್ ಬಳಸಲಾಗುತ್ತದೆ. ಇದೀಗ ರೀ ರೈಲ್ ಹಳಿತಪ್ಪಿದೆ. ರಾಜಾಜಿನಗರ ಮೆಟ್ರೋ ನಿಲ್ದಾಣ ಸಮೀಪದ ಕರ್ವ್‌ನಲ್ಲಿ ಈ ಘಟನೆ ನಡೆದಿದೆ. ಇದರಿಂದ ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲೀ ಭಾರೀ ವ್ಯತ್ಯಯವಾಗಿದೆ. ಇನ್ನು ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ಏಕಮುಖವಾಗಿ ಮಾತ್ರ ಸಂಚರಿಸುತ್ತಿದೆ.
ಸೋಮವಾರ ಮಧ್ಯರಾತ್ರಿ ಸಂಚರಿಸುತ್ತಿದ್ದಾಗ ಈ ರೀ ರೈಲು ಹಳಿ ತಪ್ಪಿದೆ. ಸದ್ಯ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್) ಸಿಬ್ಬಂದಿ ರೀ ರೈಲು ಅನ್ನು ಹಳಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಮಧ್ಯಾಹ್ನದವರೆಗೂ ಈ ಸಮಸ್ಯೆ ಇರಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗಾಂಜಾ ಮಾರಾಟ ಆರೋಪ; ಮಾಜಿ ಸಚಿವ ಮುನಿರತ್ನ ವಿರುದ್ಧ ದೂರು
ರೀ ರೈಲ್ ಹಳಿ ತಪ್ಪಿದ ಕಾರಣ ಶ್ರೀರಾಮಂಪುರ, ಕುವೆಂಪು, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್, ಸ್ಯಾಂಡಲ್ ಸೋಪ್ ಫ್ಯಾಕ್ಟರಿ ನಡುವೆ ಮೆಟ್ರೋ ಸಂಚಾರ ನಿಂತಿದೆ. ನಾಗಸಂದ್ರದಿಂದ ಯಶವಂತಪುರ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯಿಂದ ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣದ ನಡುವೆ ಮಾತ್ರ ರೈಲು ಸೇವೆಗಳು ಲಭ್ಯವಿರುತ್ತವೆ. ಎಲ್ಲಿಯೂ ನಿಗದಿತ ಸಮಯಕ್ಕೆ ಮೆಟ್ರೋ ಸಂಚಾರ ನಡೆಸುತ್ತಿಲ್ಲ. ಮಂತ್ರಿ ಸ್ಕ್ವೇರ್‌ನಿಂದ ಯಶವಂತಪುರದ ತನಕ ಒಂದು ಮಾರ್ಗದಲ್ಲಿ ಅರ್ಧ ತಾಸಿಗೆ ಒಂದು ಮೆಟ್ರೋ ಸಂಚರಿಸುತ್ತಿದೆ. ನಾಗಸಂದ್ರದಿಂದ ರೇಷ್ಮೆ ಸಂಸ್ಥೆವರೆಗಿನ ಟ್ರ್ಯಾಕ್‌ನಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ, ಮೆಟ್ರೋ ಪ್ರಯಾಣಿಕರು ಸಹಕರಿಸುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.