- ರಾಜ್ಯಕ್ಕೆ ತಮಿಳುನಾಡಿನ ನಾಮಕ್ಕಲ್‌ನಿಂದ ಮೊಟ್ಟೆ ಆಮದು
- ಊಟಿ ಸೇರಿದಂತೆ ಇನ್ನಿತರ ಪ್ರದೇಶಗಳಿಂದ ಹಾಪ್‌ಕಾಮ್ಸ್‌ಗೆ ತರಕಾರಿ
ಇತ್ತೀಚೆಗೆ ರಾಜ್ಯದ ಕೆಲವೆಡೆ ಸುರಿದ ಭಾರೀ ಮಳೆಯಿಂದಾಗಿ ತರಕಾರಿಗಳು ಕೊಳೆತು ನಾಶವಾಗಿವೆ. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿಗಳು ಸರಬರಾಜು ಆಗಿದೆ. ಈ ಹಿನ್ನೆಲೆ, ಬೆಂಗಳೂರಿನ ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ.
ಬೆಂಗಳೂರಿನ ಕಲಾಸಿಪಾಳ್ಯ, ಕೆ ಆರ್ ಮಾರುಕಟ್ಟೆ, ಮಲ್ಲೇಶ್ವರಂ, ಯಶವಂತಪುರ ಮಾರುಕಟ್ಟೆ ಸೇರಿದಂತೆ ಹಾಪ್‌ಕಾಮ್ಸ್‌ಗಳಲ್ಲಿಯೂ ಕೂಡ ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ. ದರ ಏರಿಕೆಗೆ ಜನ ಕಂಗಾಲಾಗಿದ್ದಾರೆ.
ಹೊಸೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಸೇರಿದಂತೆ ನಾನಾ ಪ್ರದೇಶಗಳಿಂದ ಬೆಂಗಳೂರಿಗೆ ತರಕಾರಿ ಪೂರೈಕೆಯಾಗುತ್ತದೆ.
ಹಾಪ್‌ಕಾಮ್ಸ್‌ಗೆ ಊಟಿ ಸೇರಿದಂತೆ ಇನ್ನಿತರ ಪ್ರದೇಶಗಳಿಂದ ತರಕಾರಿ ಬರುತ್ತದೆ. ಸಾಗಾಣಿಕ ವೆಚ್ಚ ಹೆಚ್ಚಾದ ಹಿನ್ನೆಲೆ ಇಲ್ಲಿಯೂ ಬೆಲೆ ಏರಿಕೆಯಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಕೆಜಿಗೆ ₹40 ಮಾರಾಟವಾಗುತ್ತಿದ್ದ ಬೀನ್ಸ್ ಬೆಲೆ ಇದೀಗ ₹120 ದಾಟಿದೆ. ಬದನೆಕಾಯಿ ಕೆಜಿಗೆ ₹35 ಇದ್ದ ದರ ಇದೀಗ ₹80 ದಾಟಿದೆ. ಇನ್ನುಳಿದಂತೆ ₹100 ಇದ್ದ ಹಸಿ ಶುಂಠಿ ದರ ಇದೀಗ ಚಿಲ್ಲರೆ ಮಾರುಕಟ್ಟೆಯಲ್ಲಿ ₹220 ಇದೆ. ಹಾಪ್‌ಕಾಮ್ಸ್‌ನಲ್ಲಿ ₹235 ಇದೆ.
ಮಳೆ ಅಬ್ಬರವೇ ತರಕಾರಿಗಳ ಬೆಲೆ ಗಗನಕ್ಕೇರಲು ಕಾರಣ. ಕೆಲ ದಿನಗಳ ಹಿಂದೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ಬೆಂಗಳೂರಿನ ಸುತ್ತಮುತ್ತ ಸುರಿದ ಮಳೆಯಿಂದ ತರಕಾರಿ ಬೆಳೆಗಳಿಗೆ ಹಾನಿಯಾಗಿತ್ತು. ಹೀಗಾಗಿ, ಇಳುವರಿ ಕಡಿಮೆಯಾಗಿದ್ದು ರಾಜಧಾನಿಗೆ ಪೂರೈಕೆಯಾಗುವ ತರಕಾರಿಗಳ ಬೆಲೆ ಹೆಚ್ಚಾಗಿವೆ.
ಈ ಸುದ್ದಿ ಓದಿದ್ದೀರಾ? ವಿದ್ಯಾರ್ಥಿನಿ ಸಾವು | ಬಸ್ ಚಾಲಕರಿಗೆ ನಿರ್ದೇಶನ ನೀಡಿದ ಕೆಎಸ್‌ಆರ್‌ಟಿಸಿ
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಹಾಪ್‌ಕಾಮ್ಸ್‌ನ ಪುಟ್ಟಸ್ವಾಮಿ, “ಈ ದಿನ ತರಕಾರಿ ದರಗಳು ಹೆಚ್ಚಾಗಿವೆ. ಮಳೆಯ ಕಾರಣ ತರಕಾರಿಗಳು ಕೊಳೆತಿದ್ದು, ಇಳುವರಿ ಕಡಿಮೆ ಆಗಿದೆ. ಮೆಣಸಿನಕಾಯಿ ಕೆಜಿಗೆ ₹99, ಬೀನ್ಸ್ ₹125, ಮೂಲಂಗಿ ₹48, ಗುಂಡುಬದನೆ ₹76, ಟೊಮೆಟೋ ₹46, ಬಟಾಣಿ ಕಾಳು ₹148, ಬ್ರೊಕೋಲಿ ₹200, ನವಿಲುಕೋಸು ₹63, ನುಗ್ಗೆಕಾಯಿ ₹80, ಕೊತ್ತಂಬರಿ ಸೊಪ್ಪು ₹108, ಬೆಂಡೆಕಾಯಿ ₹54, ₹ಪುದಿನಾ ಕೆಜಿಗೆ ₹60 ಇದೆ” ಎಂದು ತಿಳಿಸಿದರು.
ರಾಜ್ಯದ ಕೆಲವೆಡೆ ಬೇಸಿಗೆ ಹೆಚ್ಚಾದ ಪರಿಣಾಮ ಮೊಟ್ಟೆಯ ದರ ಒಂದಕ್ಕೆ ₹6 ರಿಂದ ₹7 ಇದೆ. ಈ ದರ ಇನ್ನೂ ಎರಡು ತಿಂಗಳು ಮುಂದುವರೆಯುವ ಸಾಧ್ಯತೆಯಿದೆ. ತಮಿಳುನಾಡಿನ ನಾಮಕ್ಕಲ್‌ನಿಂದ ರಾಜ್ಯಕ್ಕೆ ಮೊಟ್ಟೆ ಬರುತ್ತಿದೆ.