- ಪತಿ ಹಾಗೂ ಆತನ ಗರ್ಲ್‌ಫ್ರೆಂಡ್ ವಿರುದ್ಧ ಡೆತ್‌ನೋಟ್ ಬರೆದಿಟ್ಟ ಪವಿತ್ರಾ
- ಪತಿ ಅನೈತಿಕ ಸಂಬಂಧ ಹೊಂದಿರುವುದು ತಿಳಿದು ಮನನೊಂದು ಆತ್ಮಹತ್ಯೆ
ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೆಗ್ಗನಹಳ್ಳಿ ನಿವಾಸಿ ಪವಿತ್ರಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಜುಲೈ 2ರಂದು ಬೆಳಗಿನ ಜಾವ 2 ಗಂಟೆಗೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮೃತ ಯುವತಿ ಸಾಯುವುದಕ್ಕೂ ಮುನ್ನ ತನ್ನ ಪತಿ ಹಾಗೂ ಆತನ ಗರ್ಲ್‌ಫ್ರೆಂಡ್ ವಿರುದ್ಧ ಡೆತ್‌ನೋಟ್ ಬರೆದಿಟ್ಟು ವಾಟ್ಸ್‌ಆಪ್‌ನಲ್ಲಿ ಸ್ಟೇಟಸ್ ಹಾಕಿ ಬಳಿಕ ಸಾವಿಗೆ ಶರಣಾಗಿದ್ದಾರೆ.
ಮೃತ ಯುವತಿ ಪವಿತ್ರಾ ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿ ಚೇತನ ಗೌಡ ಅವರನ್ನು ಎರಡನೇ ಮದುವೆಯಾಗಿದ್ದರು. ಈ ಚೇತನ್ ಗೌಡ ಎಂಬುವವರು ಸುಮುಖ ಮರ್ಚೆಂಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕ.
ಪವಿತ್ರಾಗೆ ತನ್ನ ಗಂಡ ಬೇರೊಂದು ಯುವತಿ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಗೊತ್ತಾಗಿದೆ. ಈ ಬಗ್ಗೆ ಪವಿತ್ರಾ ಹಾಗೂ ಚೇತನ್ ಗೌಡ ನಡುವೆ ಪದೇಪದೆ ಜಗಳವಾಗುತ್ತಿತ್ತು.
ಈ ವಿಚಾರದ ಬಗ್ಗೆ ಪವಿತ್ರಾ ತನ್ನ ತಾಯಿ ಪದ್ಮಮ್ಮ ಬಳಿ ಹೇಳಿಕೊಂಡಿದ್ದರು. ಗಂಡನ ಅಕ್ರಮ ಸಂಬಂಧಕ್ಕೆ ಮನನೊಂದು ಪವಿತ್ರಾ ಡೆತ್ ನೋಟ್ ವಾಟ್ಸ್‌ಆಪ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಪಕ್ಷಗಳ ರಾಜಕೀಯ ಬ್ಲಾಕ್ ಮೇಲ್‌ಗಾಗಿ ಎಸ್ಐಟಿ ತನಿಖೆ ರಚನೆ : ಪೃಥ್ವಿ ರೆಡ್ಡಿ ಆರೋಪ
ಮಗಳ ವಾಟ್ಸಾಪ್ ಸ್ಟೇಟಸ್‌ನಲ್ಲಿ ಡೆತ್ ನೋಟ್ ನೋಡಿ ತಾಯಿ ಮನೆ ಬಳಿ ಬಂದಾಗ ಪವಿತ್ರಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಚೇತನ್ ಗೌಡ ಹಾಗೂ ಮತ್ತೋರ್ವ ಯುವತಿ ವಿರುದ್ದ ಮೃತ ಪವಿತ್ರಾ ತಾಯಿ ಪದ್ಮಮ್ಮ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚೇತನ್ ಗೌಡ ಹಾಗೂ ಮತ್ತೋರ್ವ ಯುವತಿ ವಿರುದ್ದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಐಪಿಸಿ 306 ಆತ್ಮಹತ್ಯೆ ಪ್ರಚೋದನೆ ಅಡಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಮೃತಳು ಬರೆದಿಟ್ಟಿರುವ ಡೆತ್‌ನೋಟ್ ಹಾಗೂ ಆಕೆಯ ಎರಡು ಫೋನ್ ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.