- ರಸ್ತೆ ಗುಂಡಿ ಮುಚ್ಚಲು ಉದಾಸೀನ ತೋರುತ್ತಿರುವ ಸರ್ಕಾರ; ಸಾರ್ವಜನಿಕರ ಆಕ್ರೋಶ
- 6 ಕಿ.ಮೀ ಉದ್ದದ ಗುಂಡಿಗಳನ್ನು ಸರಿಪಡಿಸಲು ಹಣ ಸಂಗ್ರಹಿಸಿದ ಸಿಟಿಜನ್ಸ್ ಗ್ರೂಪ್ ಸದಸ್ಯರು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ರಸ್ತೆ ಗುಂಡಿಗಳಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುತ್ತಿದ್ದಾರೆ. ಹಲವಾರು ಜನ ರಸ್ತೆ ಗುಂಡಿಗಳ ಕಾರಣದಿಂದ ಗಾಯಗೊಂಡಿದ್ದಾರೆ. ಇನ್ನೂ ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಷ್ಟಾದರೂ ಎಚ್ಚೆತ್ತುಕ್ಕೊಳ್ಳದ ರಾಜ್ಯ ಸರ್ಕಾರ ರಸ್ತೆ ಗುಂಡಿ ಮುಚ್ಚಲು ಯಾವುದೇ ಕ್ರಮ ಕೈಗೊಂಡಿಲ್ಲ. ಗುಂಡಿ ಮುಚ್ಚಿದರೂ ಸಹ ಅವು ಮಳೆಗಾಲದ ಸಮಯಕ್ಕೆ ಬಾಯಿ ತೆರೆದು ಬಲಿಗಾಗಿ ಕಾಯುತ್ತಿರುತ್ತವೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ‘ಸಿಟಿಜನ್ಸ್ ಗ್ರೂಪ್, ಈಸ್ಟ್ ಬೆಂಗಳೂರು’ ಸಂಘಟನೆ ಸದಸ್ಯರು ಗುಂಡಿ ಮುಚ್ಚುವ ಸಲುವಾಗಿ ಸಾಲ ಮಾಡಿ, ತಮ್ಮ ಸ್ವಂತ ಖರ್ಚಿನಲ್ಲಿಯೇ ಗುಂಡಿ ಮುಚ್ಚಿದ್ದಾರೆ.
ರಸ್ತೆ ಗುಂಡಿಗಳನ್ನು ತುಂಬುವುದು ಸೇರಿದಂತೆ ಉತ್ತಮ ನಾಗರಿಕ ಸೌಲಭ್ಯಗಳನ್ನು ಒದಗಿಸುವ ಸಾರ್ವಜನಿಕರ ಮನವಿಗೆ ಸರ್ಕಾರ ಉದಾಸೀನತೆ ತೋರಿದೆ. ಇದರಿಂದ ಬೇಸತ್ತು ‘ಸಿಟಿಜನ್ಸ್ ಗ್ರೂಪ್, ಈಸ್ಟ್ ಬೆಂಗಳೂರು’ ಭಾನುವಾರ ‘ನೋ ಡೆವಲ್‌ಪಮೆಂಟ್ ನೋ ಟ್ಯಾಕ್ಸ್’ ಎಂಬ ಹ್ಯಾಷ್ ಟ್ಯಾಗ್‌ನೊಂದಿಗೆ, ಆಸ್ತಿ ತೆರಿಗೆ ಪಾವತಿಯನ್ನು ಬಹಿಷ್ಕರಿಸುವ ಅಭಿಯಾನ ಆರಂಭಿಸಿದ್ದಾರೆ.
ಕಳೆದ ವಾರ ಹಾಲನಾಯಕನಹಳ್ಳಿ, ಮುನೇಶ್ವರ ಲೇಔಟ್ ಮತ್ತು ಚೂಡಸಂದ್ರದಲ್ಲಿ 6 ಕಿ.ಮೀ ಉದ್ದದ ಗುಂಡಿಗಳನ್ನು ಸರಿಪಡಿಸಲು ಈ ಸಿಟಿಜನ್ಸ್ ಗ್ರೂಪ್, ಈಸ್ಟ್ ಬೆಂಗಳೂರು ಸದಸ್ಯರು ಸೇರಿ ಹಣ ನೀಡಿದ್ದಾರೆ.
ಗ್ರೂಪ್‌ನ ಸಂಸ್ಥಾಪಕ ಸದಸ್ಯ ಆರಿಫ್ ಮುದ್ಗಲ್(32) ಮಾತನಾಡಿ, “ಕಳೆದ ಕೆಲವು ದಿನಗಳ ಹಿಂದೆ ಈ ರಸ್ತೆ ಗುಂಡಿಗಳಿಂದ ಎರಡು ಅಪಘಾತ ಕಂಡಿದ್ದೇನೆ. ಸರ್ಕಾರ ಕಾಳಜಿ ವಹಿಸಿ ಸಾರ್ವಜನಿಕರ ಮೂಲಭೂತ ಸೌಕರ್ಯಗಳನ್ನು ಸರಿಪಡಿಸುವಲ್ಲಿ ವಿಫಲವಾಗಿದೆ. ಸರ್ಕಾರದ ನಡೆಗೆ ಬೇಸತ್ತಿದ್ದೇವೆ. ಹಾಗಾಗಿ, ರಸ್ತೆಗಳಲ್ಲಿರುವ ಈ ಗುಂಡಿಗಳನ್ನು ಮುಚ್ಚುವ ಸಲುವಾಗಿ ₹2.7 ಲಕ್ಷ ಸಾಲ ಮಾಡಿದ್ದೇನೆ” ಎಂದು ತಿಳಿಸಿದರು.
“ನನ್ನ ಅಪಾರ್ಟ್‌ಮೆಂಟ್ ಬಳಿ ವಾಸಿಸುತ್ತಿದ್ದ ಮಹಿಳೆಯೊಬ್ಬರು ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಹೊಸ ರಸ್ತೆಯಲ್ಲಿನ ಗುಂಡಿಗೆ ಗಾಡಿ ಬಿದ್ದು ಪಲ್ಟಿಯಾಗಿತ್ತು. ಇದರಿಂದ ಅವರು ಗಾಯಗೊಂಡಿದ್ದಾರೆ. ಆಗಸ್ಟ್ 14ರ ರಾತ್ರಿ ಇ-ಕಾಮರ್ಸ್ ಸಂಸ್ಥೆಯ ಡೆಲಿವರಿ ಏಜೆಂಟ್ ಅದೇ ಗುಂಡಿಯನ್ನು ತಪ್ಪಿಸಲು ಹೋಗಿ ಕಾರಿಗೆ ಡಿಕ್ಕಿ ಹೊಡೆದು ಕಾಲು ಮುರಿದುಕೊಂಡಿದ್ದಾರೆ” ಎಂದರು.
“ಗಾಯಗೊಂಡ ಡೆಲಿವೆರಿ ಏಜೆಂಟ್ ಮಂಡ್ಯದವರು. ಒಂಬತ್ತು ಸದಸ್ಯರ ಕುಟುಂಬಕ್ಕೆ ಈತನೇ ದುಡಿಯುವ ಏಕೈಕ ವ್ಯಕ್ತಿ ಮತ್ತು ಮನೆಗೆ ಆದಾಯ ತಂದುಕೊಡುವವನು ಎಂದು ನನಗೆ ತಿಳಿದು ತುಂಬಾ ಬೇಸರವಾಯಿತು. ಹಾಗಾಗಿ, ಐದು ವರ್ಷಗಳ ಹಿಂದೆ ನಾನು, ಇತರ ಸಮಾನ ಮನಸ್ಕ ಜನರೊಂದಿಗೆ ‘ಸಿಟಿಜನ್ಸ್ ಗ್ರೂಪ್, ಈಸ್ಟ್ ಬೆಂಗಳೂರು’ ಅನ್ನು ಸ್ಥಾಪಿಸಿದ್ದೆ, ಈ ಸಂಘಟನೆಯ ಸದಸ್ಯರು ಸಹ ಗುಂಡಿ ಮುಚ್ಚಲು ಹಣ ನೀಡಿದ್ದಾರೆ. ಬಹುತೇಕ ಗುಂಡಿಗಳನ್ನು ಮುಚ್ಚುವಷ್ಟು ನಮ್ಮ ಬಳಿ ಹಣವಿರಲಿಲ್ಲ, ಹಾಗಾಗಿ ನಾನು ಸಾಲವನ್ನು ತೆಗೆದುಕೊಂಡು ಕೆಲವು ಗುಂಡಿಗಳನ್ನು ಸರಿಪಡಿಸಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗುಜರಾತ್ ಮಾಡೆಲ್ ಎಂಬ ಟ್ರ್ಯಾಪ್‌ಗೆ ಬಿದ್ದಿದ್ದೇವೆ; ʼಕರ್ನಾಟಕ ಮಾದರಿʼ ಪ್ರಚಾರದ ಅಗತ್ಯವಿದೆ- ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್
“ಈ ಭಾಗದ ಜನಪ್ರತಿನಿಧಿಗಳನ್ನು ಹಲವು ಬಾರಿ ಭೇಟಿ ಮಾಡಿ ಉತ್ತಮ ರಸ್ತೆ, ಚರಂಡಿ ಹಾಗೂ ಇತರೆ ನಾಗರಿಕ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದರೂ ಯಾರೂ ಸ್ಪಂದಿಸಿಲ್ಲ” ಎಂದು ಸಂಘಟನೆ ಸದಸ್ಯ ಮಿಥಿಲೇಶ್ ಕುಮಾರ್ ತಿಳಿಸಿದರು.
“ರಾಜಕಾರಣಿಗಳು ಈ ವಿಷಯಗಳ ಬಗ್ಗೆ ಅಸಡ್ಡೆ ಹೊಂದಿದ್ದಾರೆ. ಈ ಪ್ರದೇಶಗಳ ನಿವಾಸಿಗಳು ಇತರ ರಾಜ್ಯಗಳು ಅಥವಾ ಸ್ಥಳಗಳಿಂದ ಬಂದವರು ಎಂದು ಅವರು ಭಾವಿಸುತ್ತಾರೆ. ಹೀಗಾಗಿ ಭಾನುವಾರ ಆಸ್ತಿ ತೆರಿಗೆ ಬಹಿಷ್ಕಾರ ಅಭಿಯಾನ ಆರಂಭಿಸಿದ್ದೇವೆ” ಎಂದು ಕುಮಾರ್ ಹೇಳಿದರು.
‘NoDevelopmentNoTax’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವಿಟರ್‌ನಲ್ಲಿ ಅಭಿಯಾನ ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.