- 8 ಲಕ್ಷ ಮೌಲ್ಯದ 52 ಕದ್ದ ಬ್ಯಾಟರಿಗಳನ್ನು ವಶಪಡಿಸಿಕೊಂಡ ಪೊಲೀಸರು
- ಜೆಪಿ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬ್ಯಾಟರಿ ಕದಿಯುತ್ತಿದ್ದ ಆರೋಪಿಗಳು
ರಾಜಧಾನಿ ಬೆಂಗಳೂರಿನಲ್ಲಿ ಯುಪಿಎಸ್ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜೆ ಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಶನಿವಾರ ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 8 ಲಕ್ಷ ಮೌಲ್ಯದ 52 ಕದ್ದ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಮೊಹಮ್ಮದ್ ಅರ್ಷದ್(25), ಸೈಯದ್ ಯಾರ್ಬ್(23) ಹಾಗೂ ಸಿದ್ದಿಕ್(20) ಬಂಧಿತರು. ಇವರು ಲಕ್ಷ್ಮಣ ರಾವ್ ನಗರದ ನಿವಾಸಿಗಳು.
ಆರೋಪಿಗಳು ಜೆಪಿ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬ್ಯಾಟರಿಗಳನ್ನು ಕದಿಯುತ್ತಿದ್ದರು. ಇದುವರೆಗೆ ಯಾವುದೇ ದೂರು ದಾಖಲಾಗಿರಲಿಲ್ಲ. ಇಂತಹ ಸಣ್ಣ ಕಳ್ಳತನವಾದಾಗ ಜನರು ಸಾಮಾನ್ಯವಾಗಿ ದೂರು ದಾಖಲಿಸಲು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವಾರ ಜೆ.ಪಿ.ನಗರ ಜಲಮಂಡಳಿ ಸೇವಾ ಠಾಣೆಯಲ್ಲಿ ಒಂದೇ ಕಡೆ 5 ಬ್ಯಾಟರಿ ಕಳ್ಳತನ ಮಾಡಿದ್ದರು. ಈ ಸಂಬಂಧ ದೂರು ನೀಡಿದಾಗ, ಖದೀಮರು ಸಿಕ್ಕಿ ಬಿದ್ದಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ಮೂಲದ ಮೂಲಕ ತನಿಖೆ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪೆರಿಫೆರಲ್ ರಿಂಗ್ ರೋಡ್ | 2014ರ ಕಾಯ್ದೆ ಪ್ರಕಾರ ಪರಿಹಾರ ನೀಡಿ, ಇಲ್ಲ ಯೋಜನೆ ಕೈಬಿಡಿ ಎಂದ ರೈತರು
ಶಂಕಿತರು ಪ್ರಾಥಮಿಕವಾಗಿ ಬೀಗ ಹಾಕಿದ ಕಚೇರಿಗಳು ಮತ್ತು ವಾಣಿಜ್ಯ ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದರು. ಇವರು ಕದ್ದ ಬ್ಯಾಟರಿಗಳನ್ನು ಆಟೋ ರಿಕ್ಷಾಗಳಲ್ಲಿ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 379 (ಕಳ್ಳತನದ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.