- ಹೊಸ ಟರ್ಮಿನಲ್‌ನಿಂದ ಹಾರಾಟ ಪ್ರಾರಂಭಿಸಿದ ಮೊದಲ ವಿಮಾನಯಾನ ಸಂಸ್ಥೆ ‘ಸ್ಟಾರ್ ಏರ್’
- ಎರಡು ಟರ್ಮಿನಲ್‌ಗಳ ನಡುವೆ ಇಲ್ಲಿಯವರೆಗೆ 28,040 ಶಟಲ್ ಟ್ರಿಪ್‌ಗಳನ್ನು ಕೈಗೊಳ್ಳಲಾಗಿದೆ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಟರ್ಮಿನಲ್-2 ಕಾರ್ಯಾಚರಣೆ ಆರಂಭವಾಗಿ 100 ದಿನಗಳು ಕಳೆದಿದ್ದು, ಇದುವರೆಗೂ 11 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದೆ.
ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಟರ್ಮಿನಲ್ 2 ಅನ್ನು ಉದ್ಘಾಟಿಸಿದ್ದರು. ಜನವರಿ 15 ರಂದು ವಿಮಾನ ಹಾರಾಟ ಆರಂಭವಾಗಿತ್ತು. ಅಂದಿನಿಂದ ಇಲ್ಲಿಯವರೆಗೂ 11,33,645 ಪ್ರಯಾಣಿಕರು ಈ ಟರ್ಮಿನಲ್ ಅನ್ನು ಬಳಸಿದ್ದಾರೆ.
ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಪ್ರಕಾರ, 76% ರಷ್ಟು ಸಮಯಕ್ಕೆ ಸರಿಯಾಗಿ 7,501 ವಿಮಾನ ಚಲನೆಗಳನ್ನು ಟರ್ಮಿನಲ್-2 ಕಂಡಿದೆ.
ಪ್ರಸ್ತುತ, ಟರ್ಮಿನಲ್-2 ದೇಶೀಯ ಸೇವೆಗಳನ್ನು ಮಾತ್ರ ನಿರ್ವಹಿಸುತ್ತಿದೆ. ಮುಂಬರುವ ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ಸೇವೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಮೂರು ದೇಶೀಯ ವಿಮಾನ ಸಂಸ್ಥೆಗಳಾದ ಸ್ಟಾರ್ ಏರ್, ಏರ್ ಏಷ್ಯಾ ಇಂಡಿಯಾ ಮತ್ತು ವಿಸ್ತಾರಾ ಹೊಸ ಟರ್ಮಿನಲ್‌ನಿಂದ ಕಾರ್ಯನಿರ್ವಹಿಸುತ್ತಿವೆ.
ಸ್ಟಾರ್ ಏರ್ ಜನವರಿ 15 ರಂದು ಹೊಸ ಟರ್ಮಿನಲ್‌ನಿಂದ ಹಾರಾಟವನ್ನು ಪ್ರಾರಂಭಿಸಿದ ಮೊದಲ ವಿಮಾನಯಾನ ಸಂಸ್ಥೆಯಾಗಿದೆ. ಅದಾದ ಒಂದು ತಿಂಗಳ ನಂತರ, ಏರ್ ಏಷ್ಯಾ ಇಂಡಿಯಾ ತನ್ನ ವಿಮಾನ ಸೇವೆಗಳನ್ನು ಪ್ರಾರಂಭಿಸಿತು.
ಈ ಸುದ್ದಿ ಓದಿದ್ದೀರಾ? ಲೇವಾದೇವಿದಾರರ ಕಾಟಕ್ಕೆ ಬೇಸತ್ತು ಬಿಬಿಎಂಪಿ ಗುತ್ತಿಗೆದಾರ ಆತ್ಮಹತ್ಯೆ
ಬೆಂಗಳೂರು ಏರ್ ಏಷಿಯಾ ಇಂಡಿಯಾಕ್ಕೆ ಹೋಮ್ ಬೇಸ್ ಮತ್ತು ಅತಿ ದೊಡ್ಡ ಕೇಂದ್ರವಾಗಿದ್ದು, ನಾನಾ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ 43 ದೈನಂದಿನ ನಿರ್ಗಮನಗಳನ್ನು ನಿರ್ವಹಿಸುತ್ತಿದೆ. ಏರ್‌ಲೈನ್ ತನ್ನ ಸಂಪೂರ್ಣ ದೇಶೀಯ ಕಾರ್ಯಾಚರಣೆಗಳನ್ನು ಟರ್ಮಿನಲ್-2 ಗೆ ಸ್ಥಳಾಂತರಿಸಿದೆ.
ಮೊದಲ 100 ದಿನಗಳಲ್ಲಿ ಸುಮಾರು 7,71,650 ಬ್ಯಾಗ್‌ಗಳನ್ನು ಹೊಸ ಟರ್ಮಿನಲ್‌ನಲ್ಲಿ ನಿರ್ವಹಿಸಲಾಗಿದೆ.
ಹಳೆಯ ಟರ್ಮಿನಲ್ ಮತ್ತು ಹೊಸ ಟರ್ಮಿನಲ್ ನಡುವೆ ನಿಯಮಿತ ಸಮಯದಲ್ಲಿ ಉಚಿತ ವಿಮಾನ ನಿಲ್ದಾಣ ಶಟಲ್ ಬಸ್ ಸೇವೆಗಳನ್ನು ಒದಗಿಸಲಾಗುತ್ತದೆ. ಎರಡು ಟರ್ಮಿನಲ್‌ಗಳ ನಡುವೆ ಇಲ್ಲಿಯವರೆಗೆ 28,040 ಶಟಲ್ ಟ್ರಿಪ್‌ಗಳನ್ನು ಕೈಗೊಳ್ಳಲಾಗಿದೆ.
ಟರ್ಮಿನಲ್ ಅನೇಕ ಆಹಾರ ಮತ್ತು ಪಾನೀಯ ಮಳಿಗೆಗಳನ್ನು ಹೊಂದಿದೆ. ಇಲ್ಲಿ ಪೊಡಿ ಮಸಾಲಾ ದೋಸೆಯು ಹೆಚ್ಚು ಮಾರಾಟವಾಗುವ ಖಾದ್ಯವಾಗಿದೆ. ಮೊದಲ 100 ದಿನಗಳಲ್ಲಿ 4,100 ಪೊಡಿ ಮಸಾಲೆ ದೋಸೆಯನ್ನು ಪ್ರಯಾಣಿಕರು ಆರ್ಡರ್ ಮಾಡಿದ್ದಾರೆ.