- ಪ್ರಾಯೋಗಿಕವಾಗಿ ಆಗಸ್ಟ್ 15ರಂದು ‘ಮೆಟ್ರೋ ಮಿತ್ರಾ’ ಆ್ಯಪ್ ಸೇವೆಗೆ ಚಾಲನೆ
- ಮೆಟ್ರೋ ಮಿತ್ರ ಡಿಜಿಟಲ್ ವಾಣಿಜ್ಯಕ್ಕಾಗಿ ಓಪನ್ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತದೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ನಮ್ಮ ಯಾತ್ರಿ’ ಆ್ಯಪ್ ಆಧಾರಿತ ಆಟೋ ಸಂಚಾರ ಈಗಾಗಲೇ ಆರಂಭವಾಗಿ, ಜನರನ್ನು ತಲುಪುವಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದ್ದು, ಇದೀಗ ನಗರದ ಜನರಿಗೆ ಸಂಚಾರದ ಕೊಂಡಿಯಾಗಿರುವ ನಮ್ಮ ಮೆಟ್ರೋ ನಿಲ್ದಾಣಗಳ ಬಳಿ ಶೀಘ್ರವೇ ಮೀಟರ್ ಚಾಲಿತ ‘ಮೆಟ್ರೋ ಮಿತ್ರಾ’ ಆ್ಯಪ್ ಸೇವೆ ಆರಂಭವಾಗಲು ಸಿದ್ಧವಾಗಿದೆ.
“ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳ ಆರಂಭದಿಂದ ಕೊನೆಯವರೆಗೂ ಈ ಮೆಟ್ರೋ ಮಿತ್ರಾ ಸೇವೆ ಸಿಗಲಿದೆ. ನಗರದಲ್ಲಿರುವ ಯಾವುದೇ ಮೆಟ್ರೋ ನಿಲ್ದಾಣ ಇಳಿದ ಬಳಿಕ ಆಟೋ ಅಥವಾ ಕ್ಯಾಬ್‌ಗಾಗಿ ಕಾಯುವುದು ಅಥವಾ ನಿಲ್ದಾಣದ ಎದುರು ಆಟೋಗಾಗಿ ಬುಕ್ ಮಾಡುವ ತೊಂದರೆ ಇರುವುದಿಲ್ಲ” ಎಂದು ಆಟೋ ರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಹೇಳಿದ್ದಾರೆ.
“ಪ್ರಾಯೋಗಿಕವಾಗಿ ಆಗಸ್ಟ್ 15ರಂದು ‘ಮೆಟ್ರೋ ಮಿತ್ರಾ’ ಆ್ಯಪ್ ಸೇವೆಗೆ ಚಾಲನೆ ದೊರೆಯಲಿದೆ. ಈ ಆ್ಯಪ್ ಅನ್ನು ಓಪನ್ ಮೊಬಿಲಿಟಿ ನೆಟ್‌ವರ್ಕ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ‘ಮೆಟ್ರೋ ಮಿತ್ರಾ’ ಆ್ಯಪ್ ನಮ್ಮ ಯಾತ್ರಿ ಆ್ಯಪ್‌ಗಿಂತ ಭಿನ್ನವಾಗಿದೆ. ಮೆಟ್ರೋ ಮಿತ್ರ ಡಿಜಿಟಲ್ ವಾಣಿಜ್ಯಕ್ಕಾಗಿ ಓಪನ್ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಳೆದ 11 ದಿನದಲ್ಲಿ 178 ಡೆಂಗ್ಯೂ ಪ್ರಕರಣ ವರದಿ
“ಆಗಸ್ಟ್ 15ರಂದು ಪ್ರಾಯೋಗಿಕವಾಗಿ ಆರಂಭವಾಗುವ ಈ ಮೆಟ್ರೋ ಮಿತ್ರಾ ಆ್ಯಪ್ ಆಧಾರಿತ ಆಟೋ ಸೇವೆಗೆ ಸಾಮಾನ್ಯವಾಗಿ ಓಡಾಡುವಂತಹ ಆಟೋಗಳ ಮೀಟರ್ ದರವನ್ನೇ ನಿಗದಿಪಡಿಸಲಾಗಿದೆ. ಪ್ರಯಾಣದ ಮೊದಲ ಎರಡು ಕಿ.ಮೀ ₹30 ಮತ್ತು ನಂತರದ ಪ್ರತಿ ಕಿ.ಮೀ ₹15 ಜತೆಗೆ ಹೆಚ್ಚುವರಿಯಾಗಿ ₹10 ಶುಲ್ಕವನ್ನು ಪಡೆದುಕೊಳ್ಳಲಾಗುತ್ತದೆ” ಎಂದಿದ್ದಾರೆ.