- ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ನಗರದ ಹೊಸ ರೋಡ್ ಜಂಕ್ಷನ್ ಬಳಿ ಈ ಘಟನೆ ನಡೆದಿದೆ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹದಿಂದ ಬಿಡುಗಡೆಯಾಗಿ ಹೊರ ಬಂದ ಕೆಲವೇ ಗಂಟೆಗಳಲ್ಲಿ ರೌಡಿಶೀಟರ್‌ನೊಬ್ಬನನ್ನು ವಿರೋಧಿ ಗ್ಯಾಂಗ್ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದೆ.
ಸಿದ್ದಾಪುರ ಮಹೇಶ್ ಹತ್ಯೆಯಾದ ರೌಡಿಶೀಟರ್. ಈತ ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನು. 2020ರಲ್ಲಿ ಜಯನಗರದಲ್ಲಿ ನಡೆದಿದ್ದ ಮದನ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಮಹೇಶ್ ಜೈಲು ಸೇರಿದ್ದನು. ಶುಕ್ರವಾರ ಈತನಿಗೆ ಜೈಲಿನಿಂದ ಬಿಡುಗಡೆಯಾಗಿತ್ತು.
ನಗರದ ಹೊಸ ರೋಡ್ ಜಂಕ್ಷನ್ ಬಳಿ ರೌಡಿಶೀಟರ್ ಸಿದ್ದಾಪುರ ಮಹೇಶ್ ಕಾರಿನಲ್ಲಿ ತೆರಳುತ್ತಿದ್ದನು. ಈ ವೇಳೆ, ದಾಳಿ ನಡೆಸಿದ ದುಷ್ಕರ್ಮಿಗಳು ಕಾರು ಅಡ್ಡಗಟ್ಟಿದರು. ಬಳಿಕ, ಮಾರಕಾಸ್ತ್ರಗಳಿಂದ ಮಹೇಶ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಟ್ರಾನ್ಸ್‌ಫಾರ್ಮರ್ ಸ್ಪೋಟ; ಸುಟ್ಟು ಕರಕಲಾದ ಎರಡು ಕಾರು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿದ್ದಾಪುರ ಮಹೇಶ್‌ನ ವಿರೋಧಿ ಗ್ಯಾಂಗ್ ಎಂದು ಗುರುತಿಸಿಕೊಂಡಿದ್ದ ರೌಡಿಶೀಟರ್ ವಿಲ್ಸನ್ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್, ಸುನೀಲ್ ಸೇರಿದಂತೆ ಹಲವರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹಳೆ ದ್ವೇಷದ ಹಿನ್ನೆಲೆ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ವಿರೋಧಿ ಗ್ಯಾಂಗ್‌ನಲ್ಲಿ ಮಹೇಶ್ ಲೀಡರ್ ಆಗಿದ್ದನು ಎಂದು ತಿಳಿದು ಬಂದಿದೆ. ಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಹಂತಕರ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ತನಿಖೆಗೆ ಇಳಿದಿರುವುದಾಗಿ ನಗರ ಆಗ್ನೇಯ ವಿಭಾಗದ ಪೊಲೀಸರು ತಿಳಿಸಿದ್ದಾರೆ.