- ರಾಜಕಾಲುವೆಯ ಒತ್ತುವರಿಗಳ ಪೈಕಿ 123 ಪ್ರಕರಣಗಳು ನ್ಯಾಯಾಲಯದಲ್ಲಿವೆ
- 2015-16 ರಿಂದ ಇದುವರೆಗೆ ಒಟ್ಟಾರೆ 2951 ಒತ್ತುವರಿ ಗುರುತಿಸಲಾಗಿದೆ
ಬೆಂಗಳೂರಿನಲ್ಲಿ ಬಾಕಿಯಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತ್ವರಿತಗತಿಯಲ್ಲಿ ನಡೆಸಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಚರಣೆಗೆ ಸಂಬಂಧಿಸಿದಂತೆ ಬುಧವಾರ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, “ಪಾಲಿಕೆಯ ಎಂಟು ವಲಯಗಳಲ್ಲಿ ಬಾಕಿಯಿರುವ ಒತ್ತುವರಿಗಳನ್ನು ತ್ವರಿತಗತಿಯಲ್ಲಿ ತೆರವು ಮಾಡಿ ರಾಜಕಾಲುವೆಗಳನ್ನು ನಿರ್ಮಿಸಬೇಕು. ಎಲ್ಲಿಯೂ ಜಲಾವೃತವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದರು.
“ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆಯ ಒತ್ತುವರಿಗಳ ಪೈಕಿ 123 ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ಅವುಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಿಕೊಂಡು ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಬೇಕು” ಎಂದು ತಿಳಿಸಿದರು.
“ಬಿಬಿಎಂಪಿ ವ್ಯಾಪ್ತಿಯಲ್ಲಿ 2015-16 ರಿಂದ ಇದುವರೆಗೆ ಒಟ್ಟಾರೆ 2951 ಒತ್ತುವರಿಗಳನ್ನು ಗುರುತಿಸಲಾಗಿದೆ. ಈ ಪೈಕಿ 2183 ಒತ್ತುವರಿ ಈಗಾಗಲೇ ತೆರವುಗೊಳಿಸಲಾಗಿದ್ದು, 768 ಒತ್ತುವರಿ ತೆರವುಗೊಳಿಸಬೇಕಿದೆ. ಇದರಲ್ಲಿ 123 ಪ್ರಕರಣಗಳು ನ್ಯಾಯಾಲಯಕ್ಕೆ ಸಂಬಂಧಿಸಿದ್ದಾಗಿದ್ದು, 568 ಒತ್ತುವರಿಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಭೂಮಾಪಕರಿಂದ ಮಾರ್ಕಿಂಗ್ ಪ್ರಕ್ರಿಯೆ ನಡೆಸಲಾಗಿದೆ. ತಹಶೀಲ್ದಾರರಿಂದ ನೋಟಿಸ್ ನೀಡಲಾಗುತ್ತಿದೆ. ಹಂತ-ಹಂತವಾಗಿ ತ್ವರಿತಗತಿಯಲ್ಲಿ ಎಲ್ಲ ಒತ್ತುವರಿಗಳ ತೆರವು ಕಾರ್ಯಚರಣೆ ನಡೆಯಲಿದೆ” ಎಂದು ಹೇಳಿದರು.
ಸಭೆಯಲ್ಲಿ ವಲಯ ಆಯುಕ್ತ, ವಲಯ ಜಂಟಿ ಆಯುಕ್ತರು, ಪ್ರಧಾನ ಅಭಿಯಂತರರು, ಕಾನೂನು ಕೋಶ ವಿಭಾಗದ ಮುಖ್ಯಸ್ಥರು, ಎಲ್ಲ ವಲಯ ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಜಕಾಲುವೆ ಅಕ್ರಮ ಒತ್ತುವರಿ: 13 ಕಟ್ಟಡ ನಿರ್ಮಾಣ ತೆರವು
ಕುಡಿಯುವ ನೀರಿನ ಸಮಸ್ಯೆ; ಬೋರ್‌ವೆಲ್ ಕೊರೆಸಲು ಸೂಚನೆ ನೀಡಿದ ಜಂಟಿ ಆಯುಕ್ತೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಮಹದೇವಪುರ ವಲಯದಲ್ಲಿ 110 ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಕೂಡಲೆ ಬೋರ್‌ವೆಲ್ ಕೊರೆದು ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಬಿಬಿಎಂಪಿ ವಲಯ ಜಂಟಿ ಆಯುಕ್ತೆ ಡಾ. ದಾಕ್ಷಾಯಿಣಿ ತಿಳಿಸಿದರು.
ಮಹದೇವಪುರ ವಲಯದ ಹಗದೂರು ವಾರ್ಡ್ ಹಾಗೂ ಹೂಡಿ ಉಪ ವಿಭಾಗ ವ್ಯಾಪ್ತಿಯಲ್ಲಿ 110 ಹಳ್ಳಿಗಳ ಪೈಕಿ ಬರುವ ಹಳ್ಳಿಗಳಿಗೆ ಭೇಟಿ ನೀಡಿ ಸ್ಥಳಿಯ ನಿವಾಸಿಗಳ ಅಹವಾಲುಗಳನ್ನು ಸ್ವೀಕರಿಸಿ ನೀರಿನ ಸಮಸ್ಯೆಯಿರುವ ಕಡೆ ಕೂಡಲೆ ಬೋರ್ ವೆಲ್ ಕೊರೆದು ನೀರಿನ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಗದೂರು ವಾರ್ಡ್ ವಾರ್ಡ್ ವ್ಯಾಪ್ತಿಯಲ್ಲಿ ಬರುವ ರಾಮಗೊಂಡನಹಳ್ಳಿ, ನಲ್ಲೂರಹಳ್ಳಿ, ಪಟ್ಟಂದೂರು ಅಗ್ರಹಾರ, ಗಾಂಧಿಪುರ ಗ್ರಾಮಗಳಿಗೆ ಅವರು ಭೇಟಿ ನೀಡಿದರು. ರಾಮಗೊಂಡನಹಳ್ಳಿ ಹಾಗೂ ಗಾಂಧಿಪುರದಲ್ಲಿ ತಲಾ 2 ಬೋರ್ ವೆಲ್ ಕೊರೆಸಲು ಅಧಿಕಾರಿಗಳಿಗೆ ಸೂಚಿಸಿದರು.
ಪರಿಶೀಲನೆಯಲ್ಲಿ ಪಾಲಿಕೆಯ ಇಂಜಿನಿಯರ್‌ಗಳು, ಜಲಮಂಡಳಿಯ ಇಂಜಿನಿಯರ್‌ಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.