- ಗಿಫ್ಟ್ ಬಾಕ್ಸ್ ಮುಖಾಂತರ ಡ್ರಗ್ಸ್ ಪ್ಯಾಕ್ ಮಾಡಿ ಗ್ರಾಹಕರಿಗೆ ಮಾರಾಟ
- ಡ್ರಗ್ಸ್ ದಂಧೆ ಆರೋಪದ ಮೇಲೆ ವಿಮಾ ಕಂಪನಿಯ ಕಾರ್ಯನಿರ್ವಾಹಕನ ಬಂಧನ
ರಾಜಧಾನಿ ಬೆಂಗಳೂರಿನಲ್ಲಿ ಆನ್‌ಲೈನ್ ಡೆಲಿವೆರಿ ಮೂಲಕ ಡ್ರಗ್ಸ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.
ಅಶೋಕನಗರದ ಬಾಡಿಗೆ ಮನೆಯೊಂದರಲ್ಲಿ ಆರೋಪಿಗಳು ನೆಲೆಸಿದ್ದರು. ಆಫ್ರಿಕನ್ ಪ್ರಜೆಗಳಿಂದ ಡ್ರಗ್ಸ್ ಪಡೆದು ಗಿಫ್ಟ್ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಿ ಗ್ರಾಹಕರಿಗೆ ತಲುಪಿಸುತ್ತಿದ್ದರು. ಮತ್ತೆ ಅದೇ ಗಿಫ್ಟ್ ಬಾಕ್ಸ್ ಮುಖಾಂತರ ಹಣ ಪಡೆಯುತ್ತಿದ್ದರು.
ನಗರದಲ್ಲಿ ಈ ರೀತಿಯಾಗಿ ದಂಧೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
“ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಲಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 7 ಪೆಡ್ಲರ್‌ಗಳನ್ನು ಬಂಧಿಸಲಾಗಿದೆ” ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.
ಡ್ರಗ್ಸ್ ಆರೋಪಿಯ ಬಂಧನ
ವಿಮಾ ಕಂಪನಿಯ ಕಾರ್ಯನಿರ್ವಾಹಕನನ್ನು ಡ್ರಗ್ಸ್ ದಂಧೆ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಯು ವಿಶಾಖಪಟ್ಟಣಂದಿಂದ ಮಾದಕ ವಸ್ತಗಳನ್ನು ತರೆಸಿಕೊಳ್ಳುತ್ತಿದ್ದನು. ಕಾರಿನಲ್ಲಿ ಹ್ಯಾಶಿಶ್ ಆಯಿಲ್ ಸರಬರಾಜು ಮಾಡುತ್ತಿದ್ದನು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದೇವಸ್ಥಾನದಲ್ಲಿ ಯುವತಿಗೆ ಲೈಂಗಿಕ ಕಿರುಕುಳ; ದೂರನ್ನೇ ತಿರುಚಿದ ಪೊಲೀಸರು: ಆರೋಪ
19 ಮಂದಿ ಡ್ರಗ್ ಫೆಡ್ಲರ್‌ಗಳ ಬಂಧನ
ಪೊಲೀಸರು ಡ್ರಗ್ಸ್ ದಂಧೆ ನಡೆಸುವವರ ವಿರುದ್ಧ ಕಳೆದ ಹಲವು ತಿಂಗಳಿನಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಇದೀಗ 19 ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ 10 ಪೆಡ್ಲರ್‌ಗಳು ಕೇರಳದವರಾಗಿದ್ದು, ಇಬ್ಬರು ನೈಜೀರಿಯಾ ಮತ್ತು 5 ಜನ ಕೋಸ್ಟ್‌ನವರಾಗಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ರಾಜ್ಯದ ತಲಾ ಒಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಅಧಿಕಾರಿಗಳು ₹7.06 ಕೋಟಿ ಮೌಲ್ಯದ 6 ಕೆಜಿ ಡ್ರಗ್ಸ್, ಹ್ಯಾಶಿಶ್ ಆಯಿಲ್, 51.8 ಕೆಜಿ ಗಾಂಜಾ, 140 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ಗಳು, 236 ಎಕ್‌ಸ್ಟಸಿ ಮಾತ್ರೆಗಳು, 34 ಎಲ್‌ಎಸ್‌ಡಿ ಸ್ಟ್ರಿಪ್‌ಗಳು ಮತ್ತು 23 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ.