- ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಇಸ್ಕಾನ್ ಗೋವಿಂದ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ
- ಐಪಿಸಿ ಸೆಕ್ಷನ್ 354ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು
ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಜನಸಂದಣಿಯನ್ನೇ ನೆಪವಾಗಿಟ್ಟುಕೊಂಡು ಕಾಮುಕನೊಬ್ಬ 19 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ದೂರನ್ನೇ ತಿರುಚಿದ್ದಾರೆ ಎಂದು ಆರೋಪಿಸಲಾಗಿದೆ.
ಭಾನುವಾರ ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆ ಬಳಿಯಿರುವ ಇಸ್ಕಾನ್ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಉತ್ತರ ನಿವಾಸಿಯಾಗಿರುವ ಸುಮಾ (ಹೆಸರು ಬದಲಿಸಲಾಗಿದೆ) ಪ್ರತಿ ಭಾನುವಾರ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಅದೇ ರೀತಿ ಮೇ 7 ರಂದು ಆಕೆ ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ದೇವಸ್ಥಾನಕ್ಕೆ ಬಂದಿದ್ದಾರೆ. ಆಗ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ತಿಳಿದುಬಂದಿದೆ.
“ಅಂದು ಬೆಳಗ್ಗೆ 7:10ರ ಸುಮಾರಿಗೆ ದೇವರ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಿದ್ದೆ. ಈ ವೇಳೆ, ಹಿಂದಿನಿಂದ ಯಾರೋ ನನ್ನನ್ನು ಮುಟ್ಟುತ್ತಿರುವಂತೆ ಭಾಸವಾಯಿತು. ಜನಸಂದಣಿಯಿಂದಾಗಿ ಹೀಗೆ ಆಗಿರಬಹುದು. ಹಿಂದೆ ಮಹಿಳೆ ನಿಂತಿರಬೇಕು ಎಂದು ಸುಮ್ಮನಾದೆ. ಆದರೆ, ಪದೇಪದೆ ಇದು ಮುಂದುವರೆಯಿತು. ತಿರುಗಿ ನೋಡಿದರೆ, ಹಿಂದೆ ನಿಂತಿದ್ದ ವ್ಯಕ್ತಿಯೊಬ್ಬ ನನ್ನ ಸೊಂಟ ಹಿಡಿದು ತಬ್ಬಿಕೊಳ್ಳಲು ಪ್ರಯತ್ನಿಸುತ್ತಿದ್ದ, ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ” ಎಂದು ಯುವತಿ ಆರೋಪಿಸಿದ್ದಾರೆ.
“ಆತನಿಗೆ 40 ವರ್ಷ ವಯಸ್ಸಾಗಿರಬಹುದು. ಈ ಘಟನೆಯಿಂದ ನನಗೆ ಆಘಾತವಾಯಿತು. ಏನು ಮಾಡಬೇಕೆಂದು ತಿಳಿಯಲಿಲ್ಲ. ಎಚ್ಚೆತ್ತುಕೊಂಡು ಆ ವ್ಯಕ್ತಿಯನ್ನು ಹಿಡಿಯಲು ಪ್ರಯತ್ನಿಸಿದೆ. ದೇವರ ದರ್ಶನ ಮುಗಿಸಿ ಆತನನ್ನು ಹಿಡಿಯಲು ಕಾಯುತ್ತಿದ್ದೆ. ಆದರೆ, ಬಹಳ ಹೊತ್ತಾದರೂ ಆತ ಹೊರಗಡೆ ಬರಲಿಲ್ಲ. ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆವು. ಆತ ಭಯಗೊಂಡು ಹಿಂಬಾಗಿಲಿನಿಂದ ಪರಾರಿಯಾಗಿರುವುದು ಕಂಡುಬಂದಿದೆ” ಎಂದು ವಿವರಿಸಿದ್ದಾರೆ.
ಘಟನೆಯನ್ನು ಜನಪದ ನರ್ತಕಿಯೊಬ್ಬರು ಕಣ್ಣಾರೆ ಕಂಡಿದ್ದು, ದೂರು ದಾಖಲಿಸುವಂತೆ ಸುಮಾ ಅವರಿಗೆ ಹೇಳಿದ್ದಾರೆ. ಬಳಿಕ ಅವರ ಸಲಹೆಯಂತೆ ಯುವತಿ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ಯುವತಿಯೊಂದಿಗೆ ದೇವಸ್ಥಾನಕ್ಕೆ ತೆರಳಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಬಳಿಕ ತಮಗೆ ಬೇರೆ ಕೆಲಸ ಇದೆ ಎಂದು ಯುವತಿಗೆ ಹೇಳಿ ಹೊರಟು ಹೋಗಿದ್ದಾರೆ. ನಂತರ ಯುವತಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಮತ್ತೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
“ಲೈಂಗಿಕ ಕಿರುಕುಳ ಎಂದು ಹೇಳಿದಾಗ ಪೊಲೀಸ್ ಅಧಿಕಾರಿಯೊಬ್ಬರು ನನ್ನನ್ನು ನೋಡಿ ನಕ್ಕರು. ನನಗೆ ನೀಡಿರುವುದು ಲೈಂಗಿಕ ಕಿರುಕುಳ ಎಂದು ಸುಮಾರು ಎರಡು ಗಂಟೆಗಳ ಕಾಲ ಮಹಿಳಾ ಕಾನ್ಸ್‌ಟೇಬಲ್ ಸೇರಿದಂತೆ ಪೊಲೀಸ್ ಅಧಿಕಾರಿಗಳಿಗೆ ವಿವರಿಸಿದೆ. ದೂರು ನೀಡುವಾಗ ಲೈಂಗಿಕ ಕಿರುಕುಳವನ್ನು ಉಲ್ಲೇಖಿಸಬೇಡಿ ಮತ್ತು ಅದನ್ನು ದುರ್ವರ್ತನೆ ಎಂದು ದೂರು ಕೊಡಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು” ಎಂದು ಸುಮಾ ಆರೋಪಿಸಿದ್ದಾರೆ.
“ನನ್ನ ಬಳಿ ಸಿಸಿಟಿವಿ ದೃಶ್ಯಾವಳಿಗಳು ಸಾಕ್ಷಿಯಾಗಿವೆ. ನಾನು ಅದನ್ನು ದೂರಿನ ಜೊತೆಗೆ ಪೊಲೀಸರಿಗೆ ಹಸ್ತಾಂತರಿಸುತ್ತಿದ್ದೇನೆ ಎಂದು ನಾನು ದೂರಿನಲ್ಲಿ ಉಲ್ಲೇಖಿಸಿದ್ದೇನೆ. ಆದರೆ, ಪೊಲೀಸ್ ಅಧಿಕಾರಿ ಅದನ್ನು ವೈಟರ್ ನಿಂದ ಅಳಿಸಿಹಾಕಿ ಕೇವಲ ‘ಕ್ರಮ ಕೈಗೊಳ್ಳಲು ವಿನಂತಿಸಿ’ ಎಂದು ಬರೆಸಿದರು. ಪೊಲೀಸರು ಎಫ್ಐಆರ್ ದಾಖಲಿಸಿದಾಗ ನನಗೆ ಕರೆ ಮಾಡುವುದಾಗಿ ಹೇಳಿದ್ದಾರೆ” ಎಂದು ಯುವತಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣೆ | ಕೆಎಸ್‌ಆರ್‌ಟಿಸಿಗೆ 350 ಬಸ್ ಬಾಡಿಗೆ ನೀಡಿದ ಬಿಎಂಟಿಸಿ; ಬೆಂಗಳೂರಿನಲ್ಲಿ ಸೇವೆಯಲ್ಲಿ ವ್ಯತ್ಯಯ
“ಐಪಿಸಿ ಸೆಕ್ಷನ್ 354ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಶಂಕಿತನನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.