ಕಟ್ಟಡದಿಂದ ಬಿದ್ದು ಉದ್ಯಮಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ನಾಗರಬಾವಿಯಲ್ಲಿ ನಡೆದಿದೆ.
ಮಾರಾಂಜಿನಪ್ಪ(62) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಾರಾಂಜಿನಪ್ಪ ಅವರು ಗುರುವಾರ ಮುಂಜಾನೆ 3 ಗಂಟೆ ವೇಳೆಗೆ ನಾಗರಬಾವಿಯಲ್ಲಿರುವ ತಮ್ಮ ಎರಡನೇ ಪತ್ನಿಯ ಮನೆಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಎರಡನೇ ಪತ್ನಿಯೇ ಕೊಲೆ ಮಾಡಿರುವುದಾಗಿ ಮೊದಲ ಪತ್ನಿಯು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಾರಾಂಜಿನಪ್ಪ ಅವರನ್ನು ಎರಡನೇ ಪತ್ನಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಉದ್ಯಮಿ ಮೃತಪಟ್ಟಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಾರಾಂಜಿನಪ್ಪ ಕುಟುಂಬಸ್ಥರು ಎರಡನೇ ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆಕಸ್ಮಿಕವಾಗಿ ಕಟ್ಟಡದಿಂದ ಬಿದ್ದಿರುವ ಬಗ್ಗೆ ವೈದ್ಯರು ವರದಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತನಿಖೆ ಮುಂದುವರೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲೈಫ್ ಟೈಂ ಟ್ಯಾಕ್ಸ್ | ಸರ್ಕಾರದ ವಿರುದ್ಧ ಸಿಡಿದೆದ್ದ ಗೂಡ್ಸ್ ವಾಹನ ಮಾಲೀಕರು; ಸೆ. 1ರಂದು ಪ್ರತಿಭಟನೆ
ಮಾರಾಂಜಿನಪ್ಪ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಮೊದಲ ಹೆಂಡತಿಯು ಬಾಗಲಕುಂಟೆಯಲ್ಲಿ ವಾಸವಾಗಿದ್ದಾರೆ. ಎರಡನೇ ಪತ್ನಿ ಅನ್ನಪೂರ್ಣೇಶ್ವರಿನಗರದಲ್ಲಿ ಇದ್ದರು. ಆಗಸ್ಟ್ 30ರಂದು ರಾತ್ರಿ ಎರಡನೇ ಪತ್ನಿಯ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಮಾರಾಂಜಿನಪ್ಪ ಕುಡಿದಿದ್ದರು ಎನ್ನಲಾಗಿದೆ.