ಬೆಂಗಳೂರಿನಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧನದಲ್ಲಿರುವ ಐವರು ಶಂಕಿತ ಉಗ್ರರನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಅಪರಾಧ ವಿಭಾಗಕ್ಕೆ(ಸಿಸಿಬಿ) 10 ದಿನಗಳ ಕಾಲಾವಕಾಶ ನೀಡಿ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿದೆ.
ಐವರು ಶಂಕಿತರ ಕಸ್ಟಡಿ ವಿಚಾರಣೆಗೆ ಸಿಸಿಬಿ 15 ದಿನಗಳ ಕಾಲಾವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಆದರೆ, ನ್ಯಾಯಾಲಯ 10 ದಿನಗಳ ಕಾಲಾವಕಾಶ ನೀಡಿದೆ. ಶಂಕಿತ ಉಗ್ರರು ಸ್ಫೋಟ ನಡೆಸಲು ಯೋಜಿಸಿದ್ದರು ಎನ್ನಲಾದ ಸ್ಥಳಗಳ ಬಗ್ಗೆ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ.
ಸುಲ್ತಾನಪಾಳ್ಯದ ಸೈಯದ್ ಸುಹೇಲ್ ಖಾನ್ (24), ಮೊಹಮ್ಮದ್ ಉಮರ್ ಖಾನ್(29), ಜಾಹಿದ್ ತಬ್ರೇಜ್(25), ಸೈಯದ್ ಮುದಸ್ಸಿರ್ ಪಾಷಾ(28) ಹಾಗೂ ಫ್ರೇಜರ್ ಟೌನ್‌ನ ಮೊಹಮ್ಮದ್ ಫಿಜಲ್ ರಬ್ಬಾನಿ (30) ಅವರನ್ನು ಜುಲೈ 18ರಂದು ಸುಲ್ತಾನಪಾಳ್ಯದಲ್ಲಿ ಬಂಧಿಸಲಾಗಿದೆ ಎಂದು ಸಿಸಿಬಿ ತಿಳಿಸಿದೆ. ಸದ್ಯ ಅವರು ಮಡಿವಾಳದ ಪೊಲೀಸ್ ಟೆಕ್ನಿಕಲ್ ಸೆಲ್‌ನಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅತ್ಯುತ್ತಮ ಆರ್.ಆರ್.ಆರ್ ನಗರವಾಗಿ ಆಯ್ಕೆಯಾದ ಬಿಬಿಎಂಪಿ
2008ರ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಕೇಂದ್ರ ಕಾರಾಗೃಹದಲ್ಲಿರುವ ಆರನೇ ಶಂಕಿತ ಟಿ ನಾಸೀರ್‌ನನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿಸಿದೆ.