- ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
- ಮೃತದೇಹಗಳೊಂದಿಗೆ ಮೂರು ದಿನ ಕಳೆದಿದ್ದ ವಿರಾರ್ಜುನ ವಿಜಯ್
ಟೆಕ್ಕಿ ಕುಟುಂಬದ ನಾಲ್ವರ ಸಾವಿಗೆ ಸಂಬಂಧಿಸಿದಂತೆ, ಗಂಡ-ಹೆಂಡತಿಯ ಮನಸ್ತಾಪ ಸಾವಿಗೆ ಕಾರಣವೆಂದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದುಬಂದಿದೆ ಎಂದು ಕಾಡುಗೋಡಿ ಪೊಲೀಸರು ತಿಳಿಸಿದ್ದಾರೆ.
ಆಂಧ್ರ ಪ್ರದೇಶ ಮೂಲದ ವೀರಾರ್ಜುನ ವಿಜಯ್ (31), ಹೇಮಾವತಿ (29) ಹಾಗೂ ಇಬ್ಬರು ಮಕ್ಕಳಾದ ಮೋಕ್ಷಾ ಮೇಘನಯನಾ (ಎರಡೂವರೆ ವರ್ಷ), ಸೃಷ್ಟಿ ಸುನಯನಾ(8 ತಿಂಗಳು) ಸಾವನ್ನಪ್ಪಿದವರು.
ಸೀಗೆಹಳ್ಳಿಯ ಸಾಯಿಗಾರ್ಡನ್ ಅಪಾರ್ಟ್ಮೆಂಟ್ನಲ್ಲಿ ಗುರುವಾರ ಈ ಘಟನೆ ಬೆಳಕಿಗೆ ಬಂದಿದೆ. ಈ ದಂಪತಿ ಆರು ವರ್ಷದ ಹಿಂದೆ ಮದುವೆ ಮಾಡಿಕೊಂಡಿದ್ದರು. ವೀರಾರ್ಜುನ ವಿಜಯ್ ಕುಟುಂಬ ಕಾಡುಗೋಡಿಯ ಸೀಗೆಹಳ್ಳಿಯ ಸಾಯಿಗಾರ್ಡನ್ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದರು.
ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ವಿರಾರ್ಜುನ ವಿಜಯ್ ಕುಂದಲಹಳ್ಳಿ ಬಳಿಯಿರುವ ಕಂಪನಿಯಲ್ಲಿ ಟೀಂ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು. ಈತನು ಷೇರು ವ್ಯವಹಾರದಲ್ಲಿ ತೊಡಗಿದ್ದನು ಎಂಬ ಮಾಹಿತಿ ಇದೆ.
ವೀರಾರ್ಜುನ ವಿಜಯ್ ಜು.31ರಂದು ಪತ್ನಿಯನ್ನು ಕೊಂದು, ನಂತರ ಆಗಸ್ಟ್ 1ರಂದು ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದಿದ್ದನು. ಮೂರು ದಿನಗಳ ಕಾಲ ಶವಗಳೊಂದಿಗೆ ಕಳೆದು ಆ.2 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಮನೆಯಿಂದ ದುವಾರ್ಸನೆ ಬಂದ ಹಿನ್ನೆಲೆ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ನೋಡಿದಾಗ ನಾಲ್ವರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಪತ್ನಿ ಹೇಮಾವತಿ ಮತ್ತು ಇಬ್ಬರು ಮಕ್ಕಳ ಮೃತದೇಹ ಬೆಡ್ ರೂಂನ ನೆಲದ ಮೇಲೆ ಬಿದ್ದಿದ್ದವು. ವೀರಾರ್ಜುನ ವಿಜಯ್ ಶವ ನೇಣು ಬಿಗಿದ ಸ್ಥಿತಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಹೇಮಾವತಿಯ ಮೃತದೇಹ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿತ್ತು. ಮೊದಲು ಹೇಮಾವತಿ, ನಂತರ ಮಕ್ಕಳು ಕೊನೆಗೆ ವೀರಾರ್ಜುನ ವಿಜಯ್ ಮೃತಪಟ್ಟಿರುವುದು ಎಫ್ಎಸ್ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿಯಲ್ಲಿ ಬಹಿರಂಗವಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜೈಲಿಂದ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ರೌಡಿಶೀಟರ್ನ ಕೊಲೆ
ನಾಲ್ಕು ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕುಟುಂಬಸ್ಥರಿಗೆ ಮೃತದೇಹಗಳನ್ನ ಶುಕ್ರವಾರ ಹಸ್ತಾಂತರಿಸಲಾಗಿದೆ. ಮೃತದೇಹಗಳನ್ನು ಆಂಧ್ರಪ್ರದೇಶಕ್ಕೆ ಕೊಂಡೊಯ್ಯಲಾಗಿದೆ ಎಂದು ಕಾಡುಗೋಡಿ ಠಾಣಾ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಕಾಡುಗೋಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಠಪತಿ, “ಎಲ್ಲ ಆಯಾಮಗಳಲ್ಲಿಯೂ ತನಿಖೆ ಮಾಡುತ್ತಿದ್ದೇವೆ. ಅವರ ಕುಟುಂಬದ ಸಂಬಂಧಿಕರ ಎಲ್ಲರ ಬಳಿಯೂ ವಿಚಾರಿಸಿದಾಗ ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಇರಲಿಲ್ಲ ಎಂದು ತಿಳಿಸಿದ್ದಾರೆ. ವೀರಾರ್ಜುನ ವಿಜಯ್ ಎಂಬುವವರು ಅವರ ಆಫೀಸ್ನಲ್ಲಿ ಸಹೋದ್ಯೋಗಿಗಳಿಗೆ ಷೇರು ಮಾರುಕಟ್ಟೆಯ ಬಗ್ಗೆ ತಿಳಿಸಿಕೊಡುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ, ಷೇರು ವ್ಯವಹಾರದಲ್ಲಿ ನಷ್ಟವಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಗಂಡ-ಹೆಂಡತಿಯ ನಡುವೆ ಮನಸ್ತಾಪ ಇತ್ತು ಎಂಬ ಬಗ್ಗೆ ಪ್ರಾಥಮಿಕ ಹಂತದ ತನಿಖೆಯಲ್ಲಿ ತಿಳಿದು ಬಂದಿದೆ. ಇನ್ನೂ ತನಿಖೆ ಮುಂದುವರೆದಿದೆ” ಎಂದು ತಿಳಿಸಿದರು.