- ಸುಮಾರು ₹5 ಕೋಟಿ ವೆಚ್ಚದಲ್ಲಿ ವಿನೂತನ ಮಾದರಿಯಲ್ಲಿ ತಿಂಡಿ ಬೀದಿ ಅಭಿವೃದ್ಧಿ
- 200 ಮೀಟರ್ ಉದ್ದದ ರಸ್ತೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿ
ಬೆಂಗಳೂರಿನ ವಿ.ವಿ ಪುರಂನಲ್ಲಿ ಸುಮಾರು ₹5 ಕೋಟಿ ವೆಚ್ಚದಲ್ಲಿ ತಿಂಡಿ ಬೀದಿಯನ್ನು ವಿನೂತನ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, 2023ರ ಆಗಸ್ಟ್ ತಿಂಗಳಲ್ಲಿ ಬಾಕಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ತಿಳಿಸಿದರು.
ವಿವಿ ಪುರಂ ತಿಂಡಿ ಬೀದಿಯನ್ನು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿವಿ ಪುರಂನ ತಿಂಡಿ ಬೀದಿಯಲ್ಲಿ ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಒಗದಿಸುವ ನಿಟ್ಟಿನಲ್ಲಿ ಹಾಗೂ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಜ್ಜನ್ ರಾವ್ ವೃತ್ತ ಮತ್ತು ಮಿನರ್ವ ವೃತ್ತದ ನಡುವೆ ಇರುವ ಸುಮಾರು 200 ಮೀಟರ್ ಉದ್ದದ ರಸ್ತೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರ ಬಾಕಿ ಕಾಮಗಾರಿ ಪೂರ್ಣಗೊಳಿಸಲಾಗುವುದು” ಎಂದು ಹೇಳಿದರು.
“ವಿವಿ ಪುರಂ ತಿಂಡಿಬೀದಿಯಲ್ಲಿ ಎಲ್ಲ ವ್ಯಾಪಾರಿಗಳ ಸಹಯೋಗದೊಂದಿಗೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸ್ಥಳದಲ್ಲಿದ್ದ ಸಮಸ್ಯೆಗಳನ್ನೆಲ್ಲಾ ಬಗೆಹರಿಸಿಕೊಂಡು ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ಒಂದು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ನವೀಕರಣಗೊಂಡ ತಿಂಡಿ ಬೀದಿಯನ್ನು ಉದ್ಘಾಟನೆಗೊಳಿಸಲಾಗುವುದು” ಎಂದು ಸ್ಥಳೀಯ ಶಾಸಕ ಉದಯ್ ಬಿ. ಗರುಡಾ ಚಾರ್ ರವರು ತಿಳಿಸಿದರು.
ಪ್ರಸ್ತುತವಾಗಿ ಒಳಚರಂಡಿ ಸಂಪರ್ಕ, ನೀರು ಸರಬರಾಜು ಸಂಪರ್ಕ, ಮಳೆನೀರುಗಾಲುವೆ ಸಂಪರ್ಕ, ಕೇಬಲ್‌ಗಳ ಲೈನ್ ಡಕ್ಟ್ ಹಾಗೂ ಕೇಬಲ್ ಚೇಂಬರ್‌ಗೆ ಸಂಬಂಧಿಸಿದ ಕಾಮಗಾರಿ ಮುಗಿದಿದೆ. ರಸ್ತೆಗೆ ಅನುಗುಣವಾಗಿ ಬೆಡ್ ಕಾಂಕ್ರಿಟ್ ಹಾಕಲಾಗಿದೆ.
ಇನ್ನೂ ಕ್ಯಾರೇಜ್ ವೇಯಲ್ಲಿ ವರ್ಣರಂಜಿತ ಬಣ್ಣದ ಕಾಂಕ್ರೀಟ್ ರಸ್ತೆ ನಿರ್ಮಾಣ, ಕರ್ಬ್ ಸ್ಟೋನ್ ಗಳ ಅಳವಡಿಕೆ, ಪಾದಚಾರಿ ಮಾರ್ಗ ನಿರ್ಮಾಣ, ಎಚ್‌ಡಿಡಿ ಕೇಬಲ್‌ಗಳೊಂದಿಗೆ ಬೀದಿ ದೀಪದ ಕಂಬಗಳ ಅಳವಡಿಕೆ, ಎಲ್ಲ ಅಂಗಡಿಗಳಿಗೆ ಕೆನೋಪಿಗಳ ಅಳವಡಿಕೆ, ಪ್ರವೇಶ ಪ್ಲಾಜಾ, ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆಯ ಸುತ್ತಮುತ್ತ ಸುಂದರೀಕರಣಗೊಳಿಸುವುದು ಸೇರಿದಂತೆ ಇನ್ನಿತರ ಕಾಮಗಾರಿಗಳು ಆಕಿ ಉಳಿದಿವೆ.
ಈ ಸುದ್ದಿ ಓದಿದ್ದೀರಾ? ಇಂದಿರಾ ಕ್ಯಾಂಟೀನ್ | ಆಹಾರ, ಸ್ವಚ್ಛತೆ ನೋಡಿಕೊಳ್ಳಲು ಬಿಬಿಎಂಪಿ ಅಧಿಕಾರಿ ನೇಮಕ
ಈ ವೇಳೆ ವಲಯ ಮುಖ್ಯ ಅಭಿಯಂತರ ರಾಜೇಶ್, ಕಾರ್ಯಪಾಲಕ ಅಭಿಯಂತರ ಮಹಾಂತೇಶ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.