- ಸುಮಾರು 40%ದಷ್ಟು ಅಪಘಾತಗಳು ರಾತ್ರಿ ವೇಳೆ ಸಂಭವಿಸಿವೆ
- ಒಟ್ಟು ಸಾವುಗಳಲ್ಲಿ 20%ರಷ್ಟು ಪಾದಚಾರಿಗಳಾಗಿದ್ದಾರೆ
ಕಳೆದ ಆರು ತಿಂಗಳಿನಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಅಪಘಾತದಿಂದ ಪ್ರತಿದಿನ ಸರಾಸರಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಬಿಡುಗಡೆ ಮಾಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, “ಅಜಾಗರೂಕ ವಾಹನ ಚಾಲನೆ, ಕಳಪೆ ಪಾದಚಾರಿ ಮೂಲಸೌಕರ್ಯ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಗಳು ಹೆಚ್ಚುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಅಪಘಾತದಿಂದಾಗಿರುವ ಒಟ್ಟು ಸಾವುಗಳಲ್ಲಿ 20%ರಷ್ಟು ಪಾದಚಾರಿಗಳಾಗಿದ್ದಾರೆ. ಇದು ನಗರದಲ್ಲಿನ ಕಳಪೆ ಪಾದಚಾರಿ ಮೂಲಸೌಕರ್ಯವನ್ನು ಸೂಚಿಸುತ್ತದೆ.
“ಸುಮಾರು 40%ರಷ್ಟು ಅಪಘಾತಗಳು ರಾತ್ರಿಯಲ್ಲಿ ಸಂಭವಿಸಿವೆ. ನಿಯಮ ಉಲ್ಲಂಘನೆಗಳು ಹೆಚ್ಚಿವೆ. ಕುಡಿದು ವಾಹನ ಚಲಾಯಿಸುವ ಪ್ರಕರಣಗಳು ಅಪಘಾತಗಳಿಗೆ ಕಾರಣವಾಗುತ್ತವೆ” ಎಂದು ಸಂಚಾರಿ ಪೊಲೀಸರು ಹೇಳಿದ್ದಾರೆ.
“ಕಳೆದ ಆರು ತಿಂಗಳಿನಿಂದ ಬೆಂಗಳೂರಿನ ರಸ್ತೆಗಳಲ್ಲಿ ಪ್ರತಿದಿನ ಸರಾಸರಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ದಾಖಲಾದ ಸಾವುನೋವುಗಳಲ್ಲಿ ಶೇ.55 ರಷ್ಟು 19 ರಿಂದ 35 ವಯೋಮಾನದವರಾಗಿದ್ದಾರೆ. ಯುವಕರು ಅತಿವೇಗದ ಚಾಲನೆ ಮತ್ತು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಾರೆ” ಎಂದು ಬಿಟಿಪಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
“ರಸ್ತೆ ಅಪಘಾತದಲ್ಲಿ 19-35 ವಯೋಮಾನದವರು ಹೆಚ್ಚು ಬಲಿಯಾಗಿದ್ದಾರೆ. ಏಕೆಂದರೆ, ಅವರು ಅತಿ ವೇಗವಾಗಿ ವಾಹನ ಚಲಾವಣೆ ಮಾಡುತ್ತಾರೆ. ಟ್ರಾಫಿಕ್ ಸಿಗ್ನಲ್ ಚಂಪ್ ಮಾಡುತ್ತಾರೆ. ವ್ಹೀಲಿಂಗ್ನಂತಹ ಅಪಾಯಕಾರಿ ಚಾಲನೆಗಳೂ ಅಪಘಾತಗಳಿಗೆ ಕಾರಣವಾಗಿವೆ” ಎಂದು ವಿಶೇಷ ಆಯುಕ್ತ (ಸಂಚಾರ) ಡಾ. ಎಂ.ಎ ಸಲೀಂ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಎಟಿಎಂ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ
“ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಹಲವಾರು ಜಾಗೃತಿ ಅಭಿಯಾನಗಳನ್ನು ಆಯೋಜಿಸಲಾಗುತ್ತಿದೆ” ಎಂದು ಅವರು ಹೇಳಿದರು.
ಹಿರಿಯ ಬಿಟಿಪಿ ಅಧಿಕಾರಿಗಳ ಪ್ರಕಾರ, “ಜನರು ವಾಹನ ದಟ್ಟಣೆ ಇರುವ ಪ್ರದೇಶಗಳಲ್ಲಿ ರಸ್ತೆ ದಾಟಲು ಪ್ರಯತ್ನಿಸಿದಾಗ ಕೆಲವು ಅಪಘಾತಗಳು ಸಂಭವಿಸುತ್ತವೆ. ಕೆಲವು ಪ್ರದೇಶಗಳಲ್ಲಿ ಸ್ಕೈವಾಕ್ಗಳು ಮತ್ತು ಪಾದಚಾರಿ ಅಂಡರ್ಪಾಸ್ಗಳಿದ್ದರೂ, ಜನರು ಅಂತಹ ಸೌಲಭ್ಯಗಳನ್ನು ಬಳಸುವುದಿಲ್ಲ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತವೆ” ಎಂದು ತಿಳಿಸಿದ್ದಾರೆ.