ದ್ವಿಚಕ್ರ ವಾಹನದಲ್ಲಿ ಸ್ನೇಹಿತನೊಂದಿಗೆ ಸಂದರ್ಶನಕ್ಕೆ ತೆರಳುತ್ತಿದ್ದ ಯುವತಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅದರ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆರೋಪಿ ರಷ್ಯಾದಲ್ಲಿ ವೈದ್ಯಕೀಯ ವ್ಯಾಸಾಂಗ ಮಾಡುತ್ತಿದ್ದಾನೆ. ಎರಡು ತಿಂಗಳ ರಜೆಗಾಗಿ ನಗರದ ಗೋವಿಂದಪುರದಲ್ಲಿನ ಅಕ್ಕನ ಮನೆಗೆ ಬಂದಿದ್ದ.
ಆ. 24ರಂದು ಸಂತ್ರಸ್ತ ಯುವತಿ ತನ್ನ ಸ್ನೇಹಿತನ ಜತೆಗೆ ದ್ವಿಚಕ್ರ ವಾಹನದಲ್ಲಿ ಸಂದರ್ಶನಕ್ಕೆ ತೆರಳುತ್ತಿದ್ದಳು. ಈ ವೇಳೆ ಕಾರಿನಲ್ಲಿ ಬಂದ ಆರೋಪಿ ಮತ್ತು ಆತನ ಸ್ನೇಹಿತರು ದ್ವಿಚಕ್ರ ವಾಹನವನ್ನು ಕಾರಿನ ಮೂಲಕ ಅಡ್ಡಗಟ್ಟಿದ್ದಾರೆ. ಬಳಿಕ ಯುವತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅದರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಆರೋಪಿಗಳ ಈ ಕೃತ್ಯದಿಂದ ನೊಂದ ಯುವತಿ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತೆಲಂಗಾಣ ಕಾಂಗ್ರೆಸ್ ನಾಯಕನ ವಿರುದ್ಧ ಅತ್ಯಾಚಾರ ಆರೋಪ
“ಯುವತಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ, ಆರೋಪಿಗಳು ಕಿರುಕುಳ ನೀಡಿದ್ದಾರೆ. ಸದ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ” ಎಂದು ನಗರದ ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಾಶಂಕರ ಗುಳೇದ ಹೇಳಿದರು.