- ರಾಜಧಾನಿಯಲ್ಲಿ ಇನ್ನೂ 700ಕ್ಕೂ ಹೆಚ್ಚು ಕಡೆ ಒತ್ತುವರಿ ತೆರವು ಬಾಕಿ
- ತೆರವು ಕಾರ್ಯಾಚರಣೆ ವೇಳೆ ಜೆಸಿಬಿ ಮೇಲೆ ಹತ್ತಿ ಬೀಗ ಕಿತ್ತುಕೊಂಡ ಮಾಜಿ ಶಾಸಕ
ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ದೊಡ್ಡನೆಕ್ಕುಂದಿಯ ಫರ್ನ್ ಸಿಟಿ ಬಡಾವಣೆಯ ವಿಲ್ಲಾದಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಐಷಾರಾಮಿ ಕ್ಲಬ್ ಹೌಸ್ ಮತ್ತು ಈಜುಕೊಳ ನಿರ್ಮಾಣ ಮಾಡಲಾಗಿದೆ. ಇದರ ತೆರವು ಕಾರ್ಯಾಚರಣೆಗೆ ಮಾಜಿ ಶಾಸಕ ನಂದೀಶ್ ರೆಡ್ಡಿ ಅಡ್ಡಿಪಡಿಸಿದ್ದು, ಇವರ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದೂರು ದಾಖಲು ಮಾಡಲು ಮುಂದಾಗಿದೆ.
ಸೋಮವಾರ ಬೆಂಗಳೂರಿನ ದೊಡ್ಡನೆಕ್ಕುಂದಿಯ ಫರ್ನ್‌ಸಿಟಿ ಲೇಔಟ್‌ನಲ್ಲಿ ಬಿಬಿಎಂಪಿ ಅಧಿಕಾರಿಗಳು ಗುರುತು ಮಾಡಿದ್ದ ರಾಜಕಾಲುವೆ ಒತ್ತುವರಿ ಸ್ಥಳಕ್ಕೆ ಬುಲ್ಡೋಜರ್ ಸಮೇತ ತೆರಳಿ, ತೆರವು ಕಾರ್ಯಾಚರಣೆ ಕೈಗೊಂಡಿದ್ದರು. ಒತ್ತುವರಿ ತೆರವು ವೇಳೆ, ಬಿಬಿಎಂಪಿ ಅಧಿಕಾರಿಗಳಿಗೆ ಬಿಜೆಪಿ ನಾಯಕ ನಂದೀಶ್ ರೆಡ್ಡಿ ತೆರವು ಮಾಡದಂತೆ ತಡೆದಿದ್ದು, ಏರು ಧ್ವನಿಯಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ರಾಜಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ಪಕ್ಷಪಾತ ಮಾಡುತ್ತಿದ್ದೀರಿ ಎಂದು ಜೆಸಿಬಿ ಮೇಲೆ ಹತ್ತಿ ಬೀಗ ಕಿತ್ತುಕೊಂಡಿದ್ದಾರೆ. “ಜೆಸಿಬಿ ಮುಂದೆ ಅಡ್ಡ ಕೂರುತ್ತೇನೆ. ತೆರವು ಮಾಡಿ” ಎಂದು ಸವಾಲು ಹಾಕಿದ್ದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, “ಸೋಮವಾರ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ, ಬಿಬಿಎಂಪಿ ಅಧಿಕಾರಿಗಳ ಕೆಲಸಕ್ಕೆ ನಂದೀಶ್ ರೆಡ್ಡಿ ಅವರು ಅಡ್ಡಿಪಡಿಸಿದ್ದಾರೆ. ಅವರ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸ್ಥಳೀಯ ವಲಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜಕಾಲುವೆ ಒತ್ತುವರಿ ತೆರವಿಗೆ ಯಾರೇ ಅಡ್ಡಿಪಡಿಸಿದರೂ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು” ಎಂದರು.
“ನಗರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ, ಮಹದೇವಪುರ ವಲಯದ ನಾನಾ ಕಡೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಮಳೆ ಸ್ಥಿತಿಗತಿ ನೋಡಿಕೊಂಡು ಕಾರ್ಯಾಚರಣೆ ನಡೆಸುತ್ತೇವೆ. ಮಳೆಯಲ್ಲಿ ಸರಿಯಾಗಿ ಒತ್ತುವರಿಯಾಗಿರುವ ಜಾಗವನ್ನು ಗುರುತು ಮಾಡಿ ತೆರವು ಮಾಡುವುದು ಕಷ್ಟವಾಗಲಿದೆ” ಎಂದು ಹೇಳಿದರು.
“ರಾಜಕಾಲುವೆ ಪಕ್ಕದಲ್ಲಿಯೇ ತೆರವು ಕಾರ್ಯ ಮಾಡಬೇಕು. ಈ ವೇಳೆ, ಕಟ್ಟಡ ಕೆಡವುವಾಗ ಆ ಸ್ಥಳದಲ್ಲಿ ಬಿದ್ದ ತ್ಯಾಜ್ಯದಿಂದ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆಯಾಗುತ್ತದೆ. ಹಾಗಾಗಿ, ತೆರವು ಕಾರ್ಯ ಸ್ಥಗಿತ ಮಾಡಲಾಗಿದೆ. ಮಳೆಯ ಸ್ಥಿತಿಗತಿ ಪರಿಶೀಲನೆ ಮಾಡಿಕೊಂಡು ಒತ್ತುವರಿ ತೆರವು ಕಾರ್ಯ ಮಾಡುತ್ತೇವೆ” ಎಂದು ತಿಳಿಸಿದರು.
ಕಳೆದ ವರ್ಷ ಸುರಿದ ಭಾರೀ ಮಳೆಗೆ ನಗರದ ರೈನ್ ಬೋ ಸಿಟಿ, ಸರ್ಜಾಪುರ ರಸ್ತೆ, ಸಾಯಿ ಲೇಔಟ್, ಮಹದೇವಪುರ ಸೇರಿದಂತೆ ಹಲವೆಡೆ ಪ್ರವಾಹವಾಗಿತ್ತು. ಇದಕ್ಕೆ ರಾಜಕಾಲುವೆ ಒತ್ತುವರಿ ಕಾರಣ ಎಂದು ಬಿಬಿಎಂಪಿ ಹೇಳಿತ್ತು. ಅದರಂತೆಯೇ ನಗರದಲ್ಲಿ 700ಕ್ಕೂ ಹೆಚ್ಚು ಕಡೆ ಒತ್ತುವರಿ ಪ್ರದೇಶಗಳನ್ನು ಗುರುತು ಮಾಡಲಾಗಿತ್ತು. ಕಳೆದ ವರ್ಷವೇ ಒತ್ತುವರಿ ತೆರವು ಕಾರ್ಯಚರಣೆ ಆರಂಭವಾಗಿತ್ತು. ಆದರೆ, ಕೇವಲ ಒಂದು ತಿಂಗಳು ಮಾತ್ರ ನಗರದಲ್ಲಿ ಬುಲ್ಢೋಜರ್ ಸದ್ದು ಮಾಡಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಈಜುಕೊಳ ತೆರವು
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನಗರದಲ್ಲಿ ಪ್ರತಿ ಒತ್ತುವರಿಗಳನ್ನು ತೆರವು ಮಾಡಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದರು. ರಾಜಧಾನಿಯಲ್ಲಿ ಇನ್ನೂ 700ಕ್ಕೂ ಹೆಚ್ಚು ಕಡೆ ಒತ್ತುವರಿ ತೆರವು ಮಾಡುವುದು ಬಾಕಿ ಉಳಿದಿದೆ.