- ಬೆಂಕಿ ಅವಘಡದಲ್ಲಿ ಬಹುತೇಕರ ಮುಖ ಮತ್ತು ಕೈಗಳು ಸುಟ್ಟಿವೆ
- ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಪ್ರತಿಕ್ರಿಯೆಗೆ ಕಾಯುತ್ತಿರುವ ಪೊಲೀಸರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೇಂದ್ರ ಕಚೇರಿಯಲ್ಲಿರುವ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ಬೆಂಕಿ ಅವಘಡ ಸಂಭವಿಸಿ ಒಂದು ವಾರ ಕಳೆದಿದೆ. ಈ ಬೆಂಕಿ ಅವಘಡದಲ್ಲಿ ಒಂಬತ್ತು ಜನ ಗಾಯಗೊಂಡಿದ್ದಾರೆ. ಈ ಪೈಕಿ ಕ್ವಾಲಿಟಿ ಕಂಟ್ರೋಲ್ ಸೆಲ್‌ನ ಮುಖ್ಯ ಎಂಜಿನಿಯರ್ ಶಿವಕುಮಾರ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಗುರುವಾರ ರಾತ್ರಿಯಿಂದ ವೆಂಟಿಲೇಟರ್‌ನಲ್ಲಿದ್ದಾರೆ ಎಂದು ತಿಳಿದುಬಂದಿದೆ.
“ಎಲ್ಲರೂ ಆರೋಗ್ಯದಲ್ಲಿ ಸ್ಥಿರವಾಗಿದ್ದಾರೆ. ಕೆಲವರು ಚೇತರಿಸಿಕೊಳ್ಳುತ್ತಿದ್ದಾರೆ. ಶಿವಕುಮಾರ್ ಅವರ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಗಾಯಾಳುಗಳು ಚೇತರಿಸಿಕೊಂಡ ನಂತರ ಚರ್ಮ ಕಸಿ ಮಾಡುವುದನ್ನು ಪ್ರಾರಂಭಿಸಲಾಗುತ್ತದೆ” ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಡೀನ್ ಮತ್ತು ನಿರ್ದೇಶಕ ಡಾ. ರಮೇಶ್ ಕೃಷ್ಣ ಮಾಹಿತಿ ನೀಡಿದರು.
“ಬೆಂಕಿ ಅವಘಡದಲ್ಲಿ ಸುಟ್ಟ ಗಾಯಗಳಿಗೆ ಒಳಗಾದ ಎಲ್ಲರನ್ನು ಆಗಸ್ಟ್ 11ರಂದು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಾರ್ಡ್‌ಗೆ ರವಾನಿಸಲಾಗಿದೆ. ಬೆಂಕಿ ಅವಘಡದಲ್ಲಿ ಬಹುತೇಕರ ಮುಖ ಮತ್ತು ಕೈಗಳಿಗೆ ಸುಟ್ಟಗಾಯಗಳಾಗಿವೆ. ಕೆಲವರ ಆರೋಗ್ಯ ಸ್ಥಿರವಾಗಿದೆ. ಸಾಮಾನ್ಯ ಆಹಾರವನ್ನು ಸೇವಿಸಲು ಸಲಹೆ ನೀಡಲಾಗಿದೆ” ಎಂದರು.
“ಕೆಲ ದಿನಗಳ ಹಿಂದೆ ಮುಖ್ಯ ಎಂಜಿನಿಯರ್ ಶಿವಕುಮಾರ್ ಮತ್ತು ಲ್ಯಾಬ್ ಆಪರೇಟರ್ ಜ್ಯೋತಿ ಅವರಿಗೆ ಮೂಗಿನ ಕ್ಯಾತಿಟರ್ ಅಳವಡಿಸಲಾಗಿದೆ. ಆದರೆ ಈಗ, ಶಿವಕುಮಾರ್ ಅವರಿಗೆ ವೆಂಟಿಲೇಟರ್ ಅಗತ್ಯವಿದೆ. ಸುಟ್ಟ ಗಾಯಗಳಾಗಿರುವುದರಿಂದ, ಗಾಯಗಳ ಸ್ವರೂಪವು ವಿಭಿನ್ನವಾಗಿರುತ್ತದೆ. ಕೆಲವು ಗಾಯಗಳು ಆಳವಾಗಿರುತ್ತವೆ. ಗಾಯಗಳಿಂದ ಗುಣವಾಗಲು ಸಮಯ ಬೇಕಾಗುತ್ತದೆ. ಈ ಪ್ರಕ್ರಿಯೆಯು ಪೂರ್ಣಗೊಂಡ ನಂತರ ತೀವ್ರವಾಗಿ ಗಾಯಗೊಂಡವರಿಗೆ ಚರ್ಮದ ಕಸಿ ಮಾಡಲಾಗುತ್ತದೆ” ಎಂದು ತಿಳಿಸಿದರು.
ಲ್ಯಾಬ್‌ನಲ್ಲಿನ ಸುರಕ್ಷತಾ ಕ್ರಮಗಳು, ಸಿಬ್ಬಂದಿ ಸಾಮರ್ಥ್ಯ, ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ವಿವರಗಳ ಬಗ್ಗೆ ಮಾಹಿತಿ ಕೋರಿ ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರಿಗೆ ಕೆಲವು ದಿನಗಳ ಹಿಂದೆ ಹಲಸೂರು ಗೇಟ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಸದ್ಯ ಪ್ರಹ್ಲಾದ್ ಅವರ ಪ್ರತಿಕ್ರಿಯೆಗಾಗಿ ಪೊಲೀಸರು ಕಾಯುತ್ತಿದ್ದಾರೆ. ಪ್ರಹ್ಲಾದ್ ಅವರು ತನಿಖಾಧಿಕಾರಿ ಮುಂದೆ ಹಾಜರಾಗಬೇಕಿದೆ.
ಈ ಸುದ್ದಿ ಓದಿದ್ದೀರಾ? ದ್ವಿತೀಯ ಪಿಯು 2ನೇ ಪೂರಕ ಪರೀಕ್ಷೆ | ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ
“ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ವಿಚಾರಣೆಗೆ ಕರೆಸಲಾಗಿದೆ. ಕೆಲವರನ್ನು ಬಂಧಿಸಿ, ಅವರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಕರಣ ಸಂಬಂಧ ಉನ್ನತಾಧಿಕಾರಿಗಳಿಗೆ ಯಾವುದೇ ಸಮಸ್ಯೆಗಳಾಗದಿರಬಹುದು. ಆದರೆ, ಇತರರ ವಿರುದ್ಧ ಕ್ರಮಗಳಾಗುವ ಸಾಧ್ಯತೆಗಳಿವೆ. ಅವರೆಲ್ಲರಿಗೂ ಸಮನ್ಸ್ ಜಾರಿಯಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದುರಂತ ಸಂಭವಿಸಿದ ಸಮಯದಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗಳಾದ ಆನಂದ್, ಸ್ವಾಮಿ ಹಾಗೂ ಗ್ರೂಪ್ ಡಿ ಉದ್ಯೋಗಿ ಸುರೇಶ್ ಅವರು ರಸ್ತೆ ಡಾಂಬರು ವಸ್ತುಗಳನ್ನು ಪರೀಕ್ಷೆ ನಡೆಸುತ್ತಿದ್ದರು. ಇದಕ್ಕಾಗಿ ಹೆಚ್ಚಿನ ರಾಸಾಯನಿಕ ಬೆಂಜಿನ್ ಅಂಶ ಬಳಕೆ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.