- ತನಿಖೆ ನಡೆಸಬೇಕೆಂದು ಲೋಕಾಯುಕ್ತರಿಗೆ ದೂರು ನೀಡಿದ್ದ ಸಂಸದ ಡಿ ಕೆ ಸುರೇಶ್
- ಹಗರಣದ ತನಿಖೆಗಾಗಿ ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತ ಆದಿತ್ಯ ಬಿಸ್ವಾಸ್ ನೇಮಕ
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾಮಗಾರಿಗಳ ತನಿಖೆ ಮಾಡಿದಾಗ, ನಕಲಿ ಬಿಲ್ ಸೃಷ್ಟಿಸಿ ಬರೋಬ್ಬರಿ ₹118 ಕೋಟಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಎಂಟು ಎಂಜಿನಿಯರ್‌ಗಳನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಹಗರಣದ ತನಿಖೆಗಾಗಿ ಬೆಂಗಳೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಅವರನ್ನು ತನಿಖಾ ಅಧಿಕಾರಿಯಾಗಿ ಸರ್ಕಾರ ನೇಮಿಸಿದೆ.
ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಸತೀಶ್ ಸಹಾಯಕ ಕಾರ್ಯಪಾಲಕ ಅಭಿಯಂತರರು, ದೊಡ್ಡಯ್ಯ ಮುಖ್ಯ ಅಭಿಯಂತರರು ಟಿವಿಸಿಸಿ, ಸಿದ್ದರಾಮಯ್ಯ ಸಹಾಯಕ ಅಭಿಯಂತರರು, ಬಸವರಾಜ್ ಪ್ರಭಾರ ಕಾರ್ಯಪಾಲಕ ಅಭಿಯಂತರರು, ಉಮೇಶ್ ಸಹಾಯಕ ಅಭಿಯಂತರು, ವೆಂಕಟಲಕ್ಷ್ಮೀ ಸಹಾಯಕ ಕಾರ್ಯಾಪಾಲಕ ಅಭಿಯಂತರರು, ಶ್ರೀನಿವಾಸ್ ಕಾರ್ಯಪಾಲಕ ಅಭಿಯಂತರರು, ಶ್ರೀತೇಜ್ ಸಹಾಯಕ ಕಾರ್ಯಾಪಾಲಕ ಅಭಿಯಂತರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ನಗರಾಭಿವೃದ್ಧಿ ಇಲಾಖೆಯು ಗುರುವಾರ ಆದೇಶ ಹೊರಡಿಸಿದೆ.
ಈ ಪ್ರಕರಣದಲ್ಲಿ ಆರೋಪಿಯಾಗಿರುವ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಜೆ ಎಂ ಚಂದ್ರನಾಥ್ ಅವರು ಈಗಾಗಲೇ ನಿವೃತ್ತಿ ಹೊಂದಿದ್ದಾರೆ. ಹಾಗಾಗಿ, ಇವರನ್ನು ಹೊರತುಪಡಿಸಿ ಉಳಿದವರನ್ನು ಅಮಾನತು ಮಾಡಲಾಗಿದೆ.
ಏನಿದು ಪ್ರಕರಣ?
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 2019-2020ನೇ ಸಾಲಿನ ರಾಜರಾಜೇಶ್ವರಿ ನಗರ ವಲಯದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಹಂಚಿಕೆ ಮಾಡಲಾದ ಅನುದಾನದಲ್ಲಿ ಅಕ್ರಮ ನಡೆದಿದೆ. ಆರ್ ಆರ್ ವಲಯದಲ್ಲಿ ಕಾಮಗಾರಿ ನಡೆಸದಿದ್ದರೂ, ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಕೆಆರ್‌ಐಡಿಎಲ್ ಮುಖಾಂತರ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಬೇಕೆಂದು ಸಂಸದ ಡಿ ಕೆ ಸುರೇಶ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಇವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತರು ಆರ್ ಆರ್ ನಗರದಲ್ಲಿ ಕಾಮಗಾರಿಗಳನ್ನು ಕೈಗೊಳ್ಳದೇ, ₹118 ಕೋಟಿ ಲೂಟಿ ಮಾಡಿರುವ ಬಗ್ಗೆ ತನಿಖೆ ಕೈಗೊಂಡು, ಅದನ್ನು ಪತ್ತೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.
ಕೇವಲ 114 ಕಾಮಗಾರಿಗಳ ಪರಿಶೀಲನೆಯಿಂದ ₹118 ಕೋಟಿ ಬೃಹತ್ ಮೊತ್ತದ ಹಣ ದುರುಪಯೋಗವಾಗಿದೆ ಹಾಗೂ ಸರ್ಕಾರಕ್ಕೆ ಭಾರೀ ಮೊತ್ತದ ನಷ್ಟವಾಗಿರುವುದು ಕಂಡುಬಂದಿದೆ. ಇನ್ನೂ ಹೆಚ್ಚಿನ ಕಾಮಗಾರಿಗಳ ಪರಿಶೀಲನೆಯಿಂದ ಬೃಹತ್ ಮೊತ್ತದ ಅಕ್ರಮ ಕಾಮಗಾರಿ ಹಾಗೂ ಅಕ್ರಮವಾಗಿ ಹಣ ದುರುಪಯೋಗ ಮಾಡಿರುವ ಬಗ್ಗೆ ಪತ್ತೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಪೊಲೀಸ್ ಠಾಣೆಗಳಲ್ಲಿ ಹಿರಿಯ ಅಧಿಕಾರಿಗಳ ಫೋನ್ ನಂಬರ್ ಫಲಕ ಅಳವಡಿಸುವುದು ಕಡ್ಡಾಯ
ಹಾಗಾಗಿ, ಹಿಂದಿನ ಎರಡೂವರೆ ವರ್ಷಗಳಲ್ಲಿ ಬಿಬಿಎಂಪಿ ವತಿಯಿಂದ ಕೆಆರ್‌ಐಡಿಎಲ್ ವಹಿಸಿರುವ ಎಲ್ಲ ಕಾಮಗಾರಿಗಳನ್ನು (ಈಗಾಗಲೇ ಅನುಷ್ಠಾನಗೊಳಿಸಲಾಗಿರುವ ಮತ್ತು ಅನುಷ್ಠಾನಗೊಳಿಸುತ್ತಿರುವ) ತನಿಖೆ ಮಾಡಿ ಸಮಗ್ರ ವರದಿಯನ್ನು ಸಲ್ಲಿಸಲು ಬೆಂಗಳೂರು ಪ್ರಾದೇಶಿಕ ಆಯುಕ್ತ ಅಮಾನ್ ಆದಿತ್ಯ ಬಿಸ್ವಾಸ್ ಅವರನ್ನು ವಿಚಾರಣಾಧಿಕಾರಿಯನ್ನಾಗಿ ಸರ್ಕಾರ ನೇಮಿಸಿದೆ.
ತನಿಖೆಯನ್ನು ನಡೆಸಲು ಅಗತ್ಯವಿರುವ ಸಾಧನ ಸಲಕರಣೆಗಳು, ಸಾಮಗ್ರಿಗಳು, ಮಾನವ ಸಂಪನ್ಮೂಲ ಹಾಗೂ ಅಗತ್ಯವಿರುವ ದಾಖಲೆ ಮತ್ತು ಕಡತಗಳನ್ನು ಒದಗಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಲಾಗಿದೆ.