ಬೆಂಗಳೂರಿನಲ್ಲಿ ಅನಧಿಕೃತ ಜಾಹೀರಾತು ಹಾವಳಿ ತಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಫಲವಾದ ಕಾರಣ ಇತ್ತೀಚೆಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ನಗರದಲ್ಲಿ 59,000 ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್‌ಗಳನ್ನು ತೆರವು ಮಾಡಿದೆ.
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ನ್ಯಾಯಾಲಯದ ನಿರ್ದೇಶನಗಳನ್ನು ಜಾರಿಗೆ ತರಲು ಬಿಬಿಎಂಪಿಯು ನಗರದಾದ್ಯಂತ ಫ್ಲೆಕ್ಸ್ ಬ್ಯಾನರ್ ಹಾಕಲು ಅವಕಾಶ ನೀಡುವುದಿಲ್ಲ. ಈ ನಿಯಮ ಉಲ್ಲಂಘಿಸುವವರಿಗೆ ₹50,000 ದಂಡ ವಿಧಿಸಲಾಗುವುದು. ಯಾವುದೇ ರಾಜಕೀಯ ಪಕ್ಷಗಳು ಮತ್ತು ಮುಖಂಡರಿಗೆ ಹೋರ್ಡಿಂಗ್‌ಗಳನ್ನು ಹಾಕಲು ಅವಕಾಶ ನೀಡುವುದಿಲ್ಲ. ನಿಷೇಧಾಜ್ಞೆ ಜಾರಿ ಕುರಿತು ಪಕ್ಷಾತೀತವಾಗಿ ಶಾಸಕರೊಂದಿಗೆ ಮಾತನಾಡಿದ್ದೇನೆ. ಇನ್ನೂ ಎರಡು-ಮೂರು ದಿನಗಳಲ್ಲಿ ಇದು ಜಾರಿಗೆ ಬರಲಿದೆ” ಎಂದು ಶಿವಕುಮಾರ್ ಹೇಳಿದರು.
ಬಿಬಿಎಂಪಿ ಈವರೆಗೆ 59,000 ಫ್ಲೆಕ್ಸ್‌ಗಳನ್ನು ತೆರವು ಮಾಡಿದೆ. ಅಕ್ರಮ ಹೋರ್ಡಿಂಗ್‌ಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿಗೆ 134 ದೂರುಗಳು ಬಂದಿದ್ದು, 44 ಎಫ್‌ಐಆರ್‌ಗಳು ದಾಖಲಾಗಿವೆ. ನಿಷೇಧಾಜ್ಞೆ ಜಾರಿಗೊಳಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿರುವುದರಿಂದ ರಾಜಕೀಯ ಪಕ್ಷಗಳು ನಿಯಮಾವಳಿಗೆ ಬದ್ಧವಾಗಿರಬೇಕು.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ 3 ವರ್ಷಗಳಲ್ಲಿ 45,000 ಅಪ್ರಾಪ್ತೆಯರು ಗರ್ಭಿಣಿಯಾಗಿದ್ದಾರೆ
ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲು ಹಾಗೂ ಅಕ್ರಮ ಹೋರ್ಡಿಂಗ್‌ಗಳನ್ನು ತೆಗೆಯಲು ವಿಫಲವಾಗಿರುವ ಬಿಬಿಎಂಪಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಫ್ಲೇಕ್ಸ್, ಬ್ಯಾನರ್ ತೆಗೆದುಹಾಕಲು ವಿಫಲವಾದರೆ ನ್ಯಾಯಾಲಯಕ್ಕೆ ದಂಡ ಪಾವತಿಸುವಂತೆ ಬಿಬಿಎಂಪಿಗೆ ಸೂಚನೆ ನೀಡಿತ್ತು.