- ಕಳೆದ ಮೂರು ವರ್ಷಗಳಲ್ಲಿ ನಗರದ 58 ಕೆರೆಗಳ ನವೀಕರಣ
- 2018-19ರಲ್ಲಿ ₹229 ಕೋಟಿ ವೆಚ್ಚದಲ್ಲಿ 43 ಕೆರೆಗಳ ಅಭಿವೃದ್ಧಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಂದಾಜು ₹231 ಕೋಟಿ ವೆಚ್ಚದಲ್ಲಿ 70 ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆಸಲು ಮುಂದಾಗಿದೆ.
ಕಳೆದ ಮೂರು ವರ್ಷಗಳಲ್ಲಿ ನಗರದ 58 ಕೆರೆಗಳ ನವೀಕರಣ ಮತ್ತು ಪುನಶ್ಚೇತನಕ್ಕೆ ಪಾಲಿಕೆ ₹340 ಕೋಟಿ ಖರ್ಚು ಮಾಡಿದೆ.
“ಬಿಬಿಎಂಪಿ 2018-19ರಲ್ಲಿ ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆಯಡಿ ₹229 ಕೋಟಿ ವೆಚ್ಚದಲ್ಲಿ 43 ಕೆರೆಗಳನ್ನು ಅಭಿವೃದ್ಧಿಪಡಿಸಿದೆ. 2019-20ರಲ್ಲಿ ₹75 ಕೋಟಿ ವೆಚ್ಚದಲ್ಲಿ ಸುಮಾರು ಏಳು ಕೆರೆಗಳನ್ನು ‘ಶುಭ್ರ ಬೆಂಗಳೂರು’ ಯೋಜನೆಯಡಿ ಅಭಿವೃದ್ಧಿಪಡಿಸಿದೆ. 2021-22ರಲ್ಲಿ ಎಂಟು ಕೆರೆಗಳ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, 15ನೇ ಹಣಕಾಸು ಆಯೋಗದ ಯೋಜನೆಯಡಿ ₹42 ಕೋಟಿ ವೆಚ್ಚ ಮಾಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ” ಎಂದು ಮೂಲಗಳಿಂದ ತಿಳಿದುಬಂದಿದೆ.
“2022-23ರಲ್ಲಿ ಪಾಲಿಕೆಯು ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ ಅಂದಾಜು ₹244 ಕೋಟಿ ವೆಚ್ಚದಲ್ಲಿ 79 ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಆದರೆ, ಸರ್ಕಾರ ₹231 ಕೋಟಿ ರೂಪಾಯಿಗೆ 70 ಕೆರೆಗಳ ಅಭಿವೃದ್ಧಿಗೆ ಅನುಮೋದನೆ ನೀಡಿದೆ. ₹196 ಕೋಟಿ ಕಾಮಗಾರಿಗೆ ಆದೇಶ ಹೊರಡಿಸಿದೆ. ಕಾಮಗಾರಿ ಆರಂಭವಾಗಿದ್ದು, ಜೂನ್ ಮೊದಲ ವಾರದಲ್ಲಿ ಶೇ.30ರಷ್ಟು ಪೂರ್ಣಗೊಂಡಿದೆ” ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಆತ್ಮಹತ್ಯೆ ಮಾಡಿಕೊಂಡ ಮಗನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡ ತಾಯಿ
ಬಿಬಿಎಂಪಿಯ ಕೆರೆ ಅಭಿವೃದ್ಧಿ ವಿಭಾಗದ ಅಧಿಕಾರಿಗಳ ಪ್ರಕಾರ, “ಕಾಂಪೌಂಡ್ ಗೋಡೆಗಳ ನಿರ್ಮಾಣ, ಚರಂಡಿಗಳ ತಿರುವು, ಚೈನ್ ಲಿಂಕ್ ಫೆನ್ಸಿಂಗ್ ಮತ್ತು ವಾಕ್ ವೇ ಸುಧಾರಣೆಯು ಕೆರೆ ಅಭಿವೃದ್ಧಿ ಕಾಮಗಾರಿಗಳ ಭಾಗವಾಗಿದೆ” ಎಂದು ಹೇಳಿದ್ದಾರೆ.