ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್ ಮರುವಿಂಗಡಣೆಗೆ ಸಂಬಂಧಿಸಿದಂತೆ 225 ವಾರ್ಡ್‌ಗಳನ್ನು ನಿಗದಿಪಡಿಸಿ ರಾಜ್ಯ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಪರಿಶೀಲನಾ ಸಮಿತಿಯು ಮಾಡಿರುವ ಶಿಫಾರಸ್ಸುಗಳನ್ನು ಸರ್ಕಾರ ಒಪ್ಪಿದೆ. ಪಾಲಿಕೆಯ ಅಧಿನಿಯಮ, 2020ರ ಕಲಂ 7ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, 2011ರ ಜನಗಣತಿಯ ಆಧಾರದ ಮೇರೆಗೆ ಬಿಬಿಎಂಪಿಗೆ ಸಂಬಂಧಿಸಿದಂತೆ ವಾರ್ಡ್‌ವಾರು ಕ್ಷೇತ್ರ ಮರು ವಿಂಗಡಣೆ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಬಿಬಿಎಂಪಿಯ 243 ವಾರ್ಡ್‌ಗಳಿಂದ 225ಕ್ಕೆ ವಾರ್ಡ್‌ಗಳ ಸಂಖ್ಯೆಯನ್ನು ಸರ್ಕಾರ ಇಳಿಕೆ ಮಾಡಿತ್ತು. ಆ.18 ರಂದು ವಾರ್ಡ್‌ಗಳ ಗಡಿ ಗುರುತು ಮಾಡಿ ಅಧಿಸೂಚನೆ ಹೊರಡಿಸಿತ್ತು. ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಸೆ.1 ರವರೆಗೆ ಅವಕಾಶ ನೀಡಲಾಗಿತ್ತು.
ಅಂಚೆ ಮೂಲಕ ಮಾತ್ರವೇ ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಲು ಸರ್ಕಾರ ನಿಯಮ ವಿಧಿಸಿತ್ತು. ಮೂರು ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಹಾಗೂ ಸಲಹೆಗಳು ಬಂದಿದ್ದವು. ಅದರಲ್ಲಿ ಗಡಿ, ವಾರ್ಡ್‌ಗಳ ಹೆಸರು, ಪ್ರದೇಶದ ಹೆಸರು ನಮೂದಾಗದಿರುವುದು ಪ್ರಮುಖ ಆಕ್ಷೇಪಣೆಯಾಗಿದೆ. ಗಡಿಗಳನ್ನು ಒಂದು ವಿಧಾನಸಭಾ ಕ್ಷೇತ್ರದೊಳಗೆ ಸೇರಿಸುವಂತೆ ಕೇಳಲಾಗಿದೆ. ಇದೀಗ, ವಾರ್ಡ್‌ಗಳನ್ನು ನಿಗದಿಪಡಿಸಿ ರಾಜ್ಯಪತ್ರದ ಮೂಲಕ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಮೂರು ವರ್ಷದಿಂದ ನಡೆಯದ ಬಿಬಿಎಂಪಿ ಚುನಾವಣೆ
2015ರ ಜುಲೈ 16ರಂದು ಕರ್ನಾಟಕ ಚುನಾವಣಾ ಆಯೋಗ ಬಿಬಿಎಂಪಿ ಚುನಾವಣೆಯ ಪ್ರಕಟಣೆ ಹೊರಡಿಸಿತ್ತು. ಅದರಂತೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಬಿಬಿಎಂಪಿಯ ಎಲ್ಲ ಕ್ಷೇತ್ರಗಳಲ್ಲಿ 2015ರ ಆಗಸ್ಟ್ 22 ರಂದು ಮತ ಎಣಿಕೆ ನಡೆದು 2015ರ ಆಗಸ್ಟ್ 25 ರಂದು ಫಲಿತಾಂಶ ಹೊರಬಿದ್ದಿತ್ತು. ಈ ಚುನಾವಣೆ ನಡೆದು ಐದು ವರ್ಷಗಳ ಆಡಳಿತ ನಡೆದ ಬಳಿಕ ಇಲ್ಲಿಯವರೆಗೂ ಬಿಬಿಎಂಪಿ ಚುನಾವಣೆ ನಡೆದಿಲ್ಲ. 2020ರ ಸೆಪ್ಟಂಬರ್‌ನಲ್ಲಿ ಬಿಬಿಎಂಪಿ ಸದಸ್ಯರ (ಕಾರ್ಪೋರೇಟರ್‌ಗಳ) ಅಧಿಕಾರವಧಿ ಪೂರ್ಣಗೊಂಡಿದೆ.
ಕಳೆದ ಮೂರು ವರ್ಷದಿಂದ ಬೆಂಗಳೂರಿಗೆ ಸಮರ್ಥ ಆಡಳಿತಾಗಾರರು, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಜನಪ್ರತಿನಿಧಿಗಳು ಇಲ್ಲದೆ ನಗರದ ವಾರ್ಡ್‌ಗಳು ಹದಗೆಟ್ಟಿವೆ. ಇದೀಗ ಕಾಂಗ್ರೆಸ್ ಸರ್ಕಾರ ಡಿಸೆಂಬರ್ ವೇಳೆಗೆ ಚುನಾವಣೆ ನಡೆಸಲು ಸಿದ್ಧತೆ ನಡೆಸಿದೆ.
243 ವಾರ್ಡ್ ಮರುವಿಂಗಡಣೆ ಮಾಡಿದ್ದ ಹಿಂದಿನ ಬಿಜೆಪಿ ಸರ್ಕಾರ
ಈ ಹಿಂದಿನ ಬಿಜೆಪಿ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸಲು ವಾರ್ಡ್ ಮರುವಿಂಗಡಣೆ ಮಾಡಲು ಮುಂದಾಗಿತ್ತು. ಅದರಂತೆಯೇ, ಬಿಬಿಎಂಪಿಯ 198 ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಏರಿಕೆ ಮಾಡಿ ಅಧಿಸೂಚನೆ ಹೊರಡಿಸಿತ್ತು. ಈ ವೇಳೆ, ಬಿಬಿಎಂಪಿ-2020 ಹೊಸ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸಹ ಸ್ವೀಕರಿಸಲಾಗಿತ್ತು. ನಗರದ ಬಹುತೇಕ ನೂತನ ಹಾಗೂ ಹಳೆಯ ವಾರ್ಡ್‌ಗಳಿಗೆ ಹೆಸರು ಸೂಚಿಸಿತ್ತು.
ಬಿಬಿಎಂಪಿಯ ಮಾಜಿ ವಾರ್ಡ್ ಸದಸ್ಯರು ಸೇರಿದಂತೆ ಹಲವರು ಈ ವಾರ್ಡ್ ಮರುವಿಂಗಡಣೆ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಾರ್ಡ್‌ಗಳ ವಿಂಗಡಣೆಯಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿ 12 ವಾರಗಳಲ್ಲಿ ಹೊಸದಾಗಿ ವಾರ್ಡ್ ಮರುವಿಂಗಡಣೆ ಮಾಡುವಂತೆ ಆದೇಶ ನೀಡಿತ್ತು. ಅದರಂತೆಯೇ ಕಾಂಗ್ರೆಸ್ ಸರ್ಕಾರ ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಿಸಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದ ಆಯೋಗವನ್ನು ಜೂನ್ 23ರಂದು ಸರ್ಕಾರ ಪುನರ್ ರಚಿಸಿತ್ತು.
ವಾರ್ಡ್‌ಗಳ ಸಂಖ್ಯೆಯನ್ನು 243ರಿಂದ 225ಕ್ಕೆ ಇಳಿಸಿ ಸರ್ಕಾರ ಆ.4ರಂದು ಅಧಿಸೂಚನೆ ಹೊರಡಿಸಿತ್ತು. ಇದಾದ ಮೇಲೆ ಆಯೋಗ ವಾರ್ಡ್‌ಗಳ ಪುನರ್ ರಚಿಸಿ, ಗಡಿ ಗುರುತಿಸಿ ಕರಡು ವರದಿಯನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿತ್ತು.
ಈ ಸುದ್ದಿ ಓದಿದ್ದೀರಾ? ವಿಡಿಯೋಗಾಗಿ ಟಿಕೆಟ್ ಇಲ್ಲದೆ ಮೆಟ್ರೋದಲ್ಲಿ ಪ್ರಯಾಣಿಸಿದ ಖ್ಯಾತ ಯೂಟ್ಯೂಬರ್; ಕ್ರಮಕ್ಕೆ ಮುಂದಾದ ಮೆಟ್ರೋ
ಕಾಂಗ್ರೆಸ್ ಸರ್ಕಾರದಿಂದ ವಾರ್ಡ್ ಮರುವಿಂಗಡಣೆ
ಹಿಂದಿನ ಬಿಜೆಪಿ ಸರ್ಕಾರ ಮಾಡಿದ್ದ ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ವಾದಿಸಿದ್ದ ಕಾಂಗ್ರೆಸ್ ಸರ್ಕಾರ. ಇದೀಗ ವಾರ್ಡ್ ಮರುವಿಂಗಡಣೆಯನ್ನು ಮಾಡಿದೆ. 243 ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ಇಳಿಕೆ ಮಾಡಿದೆ. ಇನ್ನೂ ಈ ಹಿಂದಿನ ಬಿಜೆಪಿ ಸರ್ಕಾರ ವಾರ್ಡ್‌ಗಳಿಗೆ ಸೂಚಿಸಿದ್ದ ನೂತನ ಹೆಸರುಗಳನ್ನು ಕೈಬಿಟ್ಟಿದೆ.
243 ವಾರ್ಡ್‌ಗಳಿದ್ದಾಗ ಜನಸಂಖ್ಯೆ ಆಧಾರದಲ್ಲಿ ಹಲವು ವಾರ್ಡ್‌ಗಳಲ್ಲಿ ಸಂಖ್ಯೆ ಕಡಿಮೆ ಇತ್ತು. 20 ಸಾವಿರ ಜನಸಂಖ್ಯೆಗೂ ವಾರ್ಡ್ ರಚಿಸಲಾಗಿತ್ತು. ಆದರೆ, ಇದೀಗ 2011ರ ಜನಗಣತಿಗೆ ಅನುಗುಣವಾಗಿ ಸರಾಸರಿ 37,527 ಜನಸಂಖ್ಯೆಗೆ ಒಂದು ವಾರ್ಡ್ ರಚಿಸಲಾಗಿದೆ.
ವಾರ್ಡ್ ಪುನರ್ ವಿಂಗಡಣೆ ಕೆಲಸ ಪೂರ್ಣಗೊಂಡಿದೆ. ಇನ್ನೂ ವಾರ್ಡ್‌ವಾರು ಮೀಸಲಾತಿ ಪ್ರಕಟವಾಗಲಿದೆ. ಡಿಸೆಂಬರ್ ವೇಳೆಗೆ ಬಿಬಿಎಂಪಿ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ.
ವಿಧಾನಸಭೆ ಕ್ಷೇತ್ರ ಲೆಕ್ಕಾಚಾರದಲ್ಲಿ ಬಿಜೆಪಿ ಶಾಸಕರಿರುವ ಕ್ಷೇತ್ರದಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿಮೆಯಾಗಿವೆ. ದಾಸರಹಳ್ಳಿ, ಯಲಹಂಕ,ಜಯನಗರ, ವಿಧಾನಸಭೆ ಕ್ಷೇತ್ರ ಹೊರತುಪಡಿಸಿದರೆ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಕಡಿತಗೊಳಿಸಲಾಗಿದೆ ಎನ್ನಲಾಗಿದೆ.