ಬಿಜೆಪಿಗೆ ‘ಇಂದಿರಾ ಕ್ಯಾಂಟೀನ್’ ಮೇಲೆ ಯಾಕಿಷ್ಟು ದ್ವೇಷ!

Date:

Advertisements

ಕೋವಿಡ್ ಲಾಕ್‌ಡೌನ್ ಕಾಲದಲ್ಲಿ ‘ಇಂದಿರಾ ಕ್ಯಾಂಟೀನ್’ ದುಡಿದು ತಿನ್ನುವ ಬಡವರಿಗೆ ವರದಾನವಾಗಿತ್ತು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಅನುದಾನ ನೀಡಿಕೆ ಕ್ರಮೇಣ ಕ್ಷೀಣಿಸಿತು. ಈ ಬಾರಿಯ ಬಜೆಟ್‌ನಲ್ಲಿ ಬಿಜೆಪಿ ಸರ್ಕಾರ ಕ್ಯಾಂಟೀನ್‌ಗಾಗಿ ಅನುದಾನವನ್ನೇ ನಿಗದಿ ಮಾಡಿಲ್ಲ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಹಸಿವಿನಿಂದ ಬಳಲಬಾರದೆಂದು, ಎಲ್ಲರಿಗೂ ಮೂರು ಹೊತ್ತಿನ ಊಟ ಸಿಗುವಂತೆ ಮಾಡಬೇಕೆಂಬ ಉದ್ದೇಶದಿಂದ ಜಾರಿಗೆ ಬಂದದ್ದು ಇಂದಿರಾ ಕ್ಯಾಂಟೀನ್. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ‘ಇಂದಿರಾ ಕ್ಯಾಂಟೀನ್’ ಕೂಡ ಒಂದಾಗಿತ್ತು. ಈ ಕ್ಯಾಂಟೀನ್ ಅನ್ನಕ್ಕಾಗಿ ಹಾತೊರೆಯುವ ಸ್ಥಿತಿಯಲ್ಲಿದ್ದವರ ಪಾಲಿಗೆ ಅಕ್ಷಯ ಪಾತ್ರೆಯಾಗಿಯೂ ಕಂಡಿತ್ತು.

ಕೋವಿಡ್ ಲಾಕ್‌ಡೌನ್ ಕಾಲದಲ್ಲಿ ಇಂದಿರಾ ಕ್ಯಾಂಟೀನ್ ವರದಾನವಾಗಿತ್ತು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಅನುದಾನ ನೀಡಿಕೆ ಕ್ರಮೇಣ ಕ್ಷೀಣಿಸಿತು. ಈ ಬಾರಿಯ ಬಜೆಟ್‌ನಲ್ಲಿ ಅನುದಾನವನ್ನೇ ನಿಗದಿ ಮಾಡಿಲ್ಲ ಎನ್ನಲಾಗಿದೆ.

Advertisements

ಬಿಜೆಪಿ ಆಡಳಿತದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಅನುದಾನವನ್ನೇ ನೀಡಿಲ್ಲ. ಆದರೆ, ವಿಧಾನಸಭಾ ಚುನಾವಣೆಗಾಗಿ ‘ಪ್ರಜಾ ಪ್ರಣಾಳಿಕೆ’ ಬಿಡುಗಡೆ ಮಾಡಿರುವ ಬಿಜೆಪಿ, ರಾಜ್ಯದ ಮಹಾನಗರ ಪಾಲಿಕೆಯ ಪ್ರತಿ ವಾರ್ಡ್‌ಗಳಲ್ಲಿ ಕೈಗೆಟುಕುವ ದರದಲ್ಲಿ ಗುಣಮಟ್ಟದ ಮತ್ತು ಆರೋಗ್ಯಕರ ಆಹಾರವನ್ನು ಒದಗಿಸಲು ‘ಅಟಲ್ ಆಹಾರ ಕೇಂದ್ರ’ ಸ್ಥಾಪಿಸುವುದಾಗಿ ಹೇಳಿಕೊಂಡಿದೆ.

ಈಗಾಗಲೇ ಬಡವರಿಗೆ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಮಡಿಕೆಗೆ ಕಲ್ಲು ಹಾಕಿರುವ ಬಿಜೆಪಿ, ‘ಅಟಲ್ ಆಹಾರ ಕೇಂದ್ರ’ ತೆರೆಯುವುದುಂಟೇ, ಬಡವರಿಗೆ ಆಹಾರ ಒದಗಿಸುವುದುಂಟೇ ಎಂಬ ಅಸಮಾಧಾನದ ಮಾತುಗಳೂ ಕೇಳಿಬರುತ್ತಿವೆ.

ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್

2017ರ ಆಗಸ್ಟ್ 16ರಂದು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗಳನ್ನು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಹಾವೇರಿ ಸೇರಿದಂತೆ ರಾಜ್ಯದ ನಾನಾ ಕಡೆ ತೆರೆಯಲಾಗಿತ್ತು. ತಮಿಳುನಾಡಿನ ‘ಅಮ್ಮಾ ಕ್ಯಾಂಟೀನ್’ ಮಾದರಿಯಲ್ಲಿ ಸಿದ್ದರಾಮಯ್ಯನವರ ಮಹತ್ವದ ಯೋಜನೆ ಇದು.

ಬಿಬಿಎಂಪಿ ವ್ಯಾಪ್ತಿಯಲ್ಲಿ 185 ಇಂದಿರಾ ಕ್ಯಾಂಟೀನ್, 24 ಮೊಬೈಲ್ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಆಹಾರ ಒದಗಿಸುವ ಗುತ್ತಿಗೆಯನ್ನು ಶೆಫ್‌ಟಾಕ್‌, ಆದಮ್ಯ ಚೇತನ ಹಾಗೂ ರಿವಾರ್ಡ್ಸ್ ಕಂಪನಿಗಳಿಗೆ ನೀಡಲಾಗಿತ್ತು. ಶೆಫ್‌ಟಾಕ್‌  96, ಆದಮ್ಯ ಚೇತನ 40 ಹಾಗೂ ರಿವಾರ್ಡ್ಸ್ 49 ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರವನ್ನು ಸರಬರಾಜು ಮಾಡುತ್ತಿದ್ದವು.

ಬೆಳಿಗ್ಗೆ 7.30 ರಿಂದ 10.30 ವರೆಗೆ ತಿಂಡಿ, ಮಧ್ಯಾಹ್ನ 12.30ರಿಂದ 2.30ರವರೆಗೆ ಮಧ್ಯಾಹ್ನದ ಊಟ ಹಾಗೂ ರಾತ್ರಿ 7.30 ರಿಂದ 8.30ರವರೆಗೆ ಊಟವನ್ನು ಬಡವರಿಗೆ ಈ ಕ್ಯಾಂಟೀನ್ ಒದಗಿಸುತ್ತಿತ್ತು. ಬೆಳಗ್ಗೆ ₹5 ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ₹10 ಪಡೆಯಲಾಗುತ್ತಿತ್ತು.

ಇಂದಿರಾ ಕ್ಯಾಂಟೀನ್

ಇಂದಿರಾ ಕ್ಯಾಂಟೀನ್ ಸ್ಥಿತಿಗತಿ

ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಈ ಇಂದಿರಾ ಕ್ಯಾಂಟೀನ್‌ಗಳಿಗೆ ಶೇ.100ರಷ್ಟು ಆರ್ಥಿಕ ನೆರವು ನೀಡಲಾಗಿತ್ತು. ಬಳಿಕ 2019-2020ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕ್ಯಾಂಟೀನ್‌ಗೆ ಆರ್ಥಿಕ ನೆರವು ಕ್ರಮೇಣ ತಗ್ಗತೊಡಗಿತು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ಯೋಜನೆಗೆ ಯಾವುದೇ ಹಣ ಒದಗಿಸಲಿಲ್ಲ. ಪಾಲಿಕೆಯೇ ಸಂಪೂರ್ಣ ವೆಚ್ಚ ಭರಿಸುತ್ತಿತ್ತು.

ಇಂದಿರಾ ಕ್ಯಾಂಟೀನ್‌ಗಾಗಿ ಭರಿಸುವ ವೆಚ್ಚದಲ್ಲಿ ಶೇ.50ರಷ್ಟು ಸರ್ಕಾರ ನೀಡುವಂತೆ ಬಿಬಿಎಂಪಿ ಮನವಿ ಮಾಡಿತ್ತು. ಆದರೆ, ಸರ್ಕಾರದಿಂದ ಯಾವುದೇ ಅನುದಾನ ದೊರೆತಿರಲಿಲ್ಲ. ಈಗಲೂ ಕೂಡ ಕ್ಯಾಂಟೀನ್ ನಿರ್ವಹಣೆಗೆ ಸರ್ಕಾರದಿಂದ ಯಾವುದೇ ಅನುದಾನವಿಲ್ಲ. 2023-24 ಸಾಲಿನ ಪಾಲಿಕೆಯ ಬಜೆಟ್‌ನಲ್ಲಿ ಕ್ಯಾಂಟೀನ್‌ಗಾಗಿ ₹50 ಕೋಟಿ ಮೀಸಲಿರಿಸಿದೆ.

ಬೆಂಗಳೂರಿನಲ್ಲಿ ಮೊಬೈಲ್ ಕ್ಯಾಂಟೀನ್‌ಗಳು ಸೇರಿದಂತೆ ಒಟ್ಟು 209 ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಅವುಗಳಲ್ಲಿ ಈಗ ಮೊಬೈಲ್ ಕ್ಯಾಂಟೀನ್‌ಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಇನ್ನೂ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ರಾತ್ರಿ ಹೊತ್ತು ಊಟಕ್ಕೆ ಹೆಚ್ಚು ಜನ ಬರುತ್ತಿಲ್ಲ ಎಂದು ರಾತ್ರಿ ವೇಳೆ ಊಟ ನೀಡುವುದನ್ನು ನಿಲ್ಲಿಸಲಾಗಿದೆ.

ಗುತ್ತಿಗೆ ಪಡೆದ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿರುವ ಬಿಬಿಎಂಪಿ ಬಾಕಿ ಬಿಲ್ ಪಾವತಿ ಮಾಡಿಲ್ಲ. ಈ ಬಗ್ಗೆ ಗುತ್ತಿಗೆ ಪಡೆದ ಕಂಪನಿಗಳು ಹಲವು ಬಾರಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿವೆ. ಇಂದಿರಾ ಕ್ಯಾಂಟೀನ್‌ಗಳಲ್ಲಿ ಹಲವಾರು ಮೂಲಭೂತ ಸೌಲಭ್ಯಗಳ ಕೊರತೆ ಇದೆ. ನೀರಿನ ಬಿಲ್ ತುಂಬದೇ ಇರುವುದಕ್ಕೆ ಬಿಡಬ್ಲೂಎಸ್ಎಸ್‌ಬಿ ನೀರು ಸರಬರಾಜು ನಿಲ್ಲಿಸಿದೆ. ವಿದ್ಯುತ್ ಬಿಲ್ ಪಾವತಿ ಮಾಡದೇ ಇರುವುದಕ್ಕೆ ಬೆಸ್ಕಾಂ ಕೆಲವು ಕ್ಯಾಂಟೀನ್‌ಗಳಲ್ಲಿ ವಿದ್ಯುತ್ ಕಡಿತಗೊಳಿಸಿದೆ.

indira canteen

2022ರ ಆಗಸ್ಟ್ ತಿಂಗಳಿನಿಂದಲೂ ಬಾಕಿ ಪಾವತಿ ಮಾಡದ ಹಿನ್ನೆಲೆ, ಗುತ್ತಿಗೆ ಕಂಪನಿಗಳು ಹಲವು ಕ್ಯಾಂಟೀನ್‌ಗಳಿಗೆ ಆಹಾರ ಸರಬರಾಜು ಮಾಡುವುದನ್ನು ನಿಲ್ಲಿಸಿವೆ. ಶುಚಿ, ರುಚಿಯಾದ ಮತ್ತು ಆಯ್ಕೆಯ ಆಹಾರ ನೀಡುತ್ತಿಲ್ಲ. ಇಂದಿರಾ ಕ್ಯಾಂಟೀನ್‌ಗಳಲ್ಲಿ ಜನರಿಗೆ ಇಷ್ಟವಾದ ತಿಂಡಿ ಇಡ್ಲಿ ಸರಬರಾಜು ಮಾಡುವುದನ್ನು ಎಂಟು ತಿಂಗಳಿನಿಂದ ನಿಲ್ಲಿಸಲಾಗಿದೆ.

ಪ್ರಸ್ತುತ ಅದಮ್ಯ ಚೇತನ 40, ಶೆಫ್‌ಟಾಕ್‌  92 ಮತ್ತು ರಿವಾರ್ಡ್ಸ್ ಸಂಸ್ಥೆಯು 40 ಕ್ಯಾಂಟೀನ್‌ಗಳಿಗೆ ಆಹಾರ ಸರಬರಾಜು ಮಾಡುತ್ತಿದೆ. ಪ್ರಸ್ತುತ ನಗರದಲ್ಲಿ 172 ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಕೆಲವೊಂದು ಕ್ಯಾಂಟೀನ್‌ಗಳಲ್ಲಿ ರಾತ್ರಿ ಊಟ ಕೊಡುವುದನ್ನು ನಿಲ್ಲಿಸಿವೆ. ಅರೆಬರೆ ಸೌಲಭ್ಯಗಳಿಂದ ಈ ಕ್ಯಾಂಟೀನ್‌ಗಳು ಮುನ್ನಡೆಯುತ್ತಿವೆ.

ಗುಣಮಟ್ಟದ ಮತ್ತು ರುಚಿಕರ ಆಹಾರ ದೊರಕದ ಕಾರಣ ಜನ ಇಂದಿರಾ ಕ್ಯಾಂಟೀನ್‌ಗಳತ್ತ ಮುಖ ಮಾಡುವುದು ಕಡಿಮೆಯಾಗಿದೆ. ಹಲವಾರು ಕ್ಯಾಂಟೀನ್‌ಗಳ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮೇಲ್ವಿಚಾರಣೆ ಮಾಡದ ಹಿನ್ನೆಲೆ, ಟೋಕನ್ ನೀಡದೆ ಊಟ ಮತ್ತು ತಿಂಡಿ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಪಟ್ಟು ಹಿಡಿದಿದ್ದ ಬಿಜೆಪಿ

ಕಳೆದ ಹಲವು ವರ್ಷಗಳಿಂದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಇಂದಿರಾ ಕ್ಯಾಂಟೀನ್ ಹೆಸರನ್ನು ‘ಅನ್ನಪೂರ್ಣೇಶ್ವರಿ ಕ್ಯಾಂಟೀನ್’ ಆಗಿ ಬದಲಾವಣೆ ಮಾಡಬೇಕೆಂದು ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುತ್ತಿತ್ತು. ಹೆಸರು ಬದಲಾವಣೆ ಮಾಡಬೇಕೆಂಬುದು ಬಿಜೆಪಿ ನಾಯಕರ ನಿಲುವಾಗಿತ್ತು. ಇದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಆಹಾರ ತಜ್ಞೆ ಪಲ್ಲವಿ ಇಡುರೂ, “ಬಿಜೆಪಿ 2018ರಲ್ಲಿ 600 ಆಶ್ವಾಸನೆಯನ್ನು ಕೊಟ್ಟಿದ್ದಾರೆ. ಅದರಲ್ಲಿ ಗೋವು ರಕ್ಷಣೆ ಕಾಯ್ದೆ ಒಂದೇ ಜಾರಿಗೆ ತಂದಿದ್ದಾರೆ. ಬಿಜೆಪಿ ಸರ್ಕಾರ ಜನಕಲ್ಯಾಣಕ್ಕಿಂತ ಇಂತಹ ಧೃವೀಕರಣ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಈ ಹಿಂದೆ ಬಿಜೆಪಿ ನೀಡಿದ್ದ 600 ಭರವಸೆಗಳಲ್ಲಿ ಗೋವು ರಕ್ಷಣೆ ಕಾಯ್ದೆ ಬಿಟ್ಟು ಬೇರೆ ಯಾವುದಾದರೂ ಯೋಜನೆ ನೀಡಿದ್ದರೆ, ಈ ‘ಅಟಲ್‌ ಆಹಾರ ಕೇಂದ್ರ’ ಸ್ಥಾಪಿಸುತ್ತಾರೆ ಎಂದು ನಂಬಬಹುದು” ಎಂದರು.

“ನಗರದಲ್ಲಿ ಕೆಲವೆಡೆ ಗುಟುಕು ಜೀವ ಇಟ್ಟುಕೊಂಡು ಇಂದಿರಾ ಕ್ಯಾಂಟೀನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ  ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಜನರಿಗೆ ಬೇಕಾಗಿರುವ ಊಟ, ತಿಂಡಿ ಸರಿಯಾಗಿ ಲಭಿಸುತ್ತಿಲ್ಲ. ನಮ್ಮ ದುರ್ದೈವಕ್ಕೆ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಇರುವ ಅಷ್ಟೋ ಇಷ್ಟು ಇಂದಿರಾ ಕ್ಯಾಂಟೀನ್‌ಗಳು ಸಹ ಮುಚ್ಚಿ ಹೋಗುತ್ತವೆ. ಇನ್ನೂ ಬಡವರಿಗಾಗಿ ಅಟಲ್ ಆಹಾರ ಕೇಂದ್ರವನ್ನು ಸ್ಥಾಪನೆ ಮಾಡುತ್ತಾರೆ ಎಂಬ ಯಾವ ಭರವಸೆಯೂ ನಮಗಿಲ್ಲ. ಭ್ರಷ್ಟಾಚಾರವೆಂಬುವುದು ಅವರ ರಕ್ತದಲ್ಲೆ ಇದೆ” ಎಂದು ಹೇಳಿದರು.

“ಬೆಳಿಗ್ಗೆನೇ ಮನೆಯಿಂದ ಡ್ಯೂಟಿ ಮಾಡಲು ಹೊರಡುತ್ತೇನೆ, ದಿನನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದ ಕಾರಣ ಹೊರಗಡೆಯ ಹೋಟೇಲ್‌ಗಳಲ್ಲಿ ತಿಂಡಿ ತಿನ್ನಲು ತೆರಳಿದರೆ ಹೊಟ್ಟೆತುಂಬ ತಿನ್ನಲು ₹50 ರಿಂದ ₹60 ಬೇಕಾಗುತ್ತದೆ. ಒಂದು ಟೀ ಬೆಲೆ ಇದೀಗ ₹15 ದಾಟಿದೆ. ಇನ್ನು ತಿಂಡಿ ಊಟದ ದರ ಹೇಳಲು ಅಸಾಧ್ಯ. ದಿನಕ್ಕೆ ಅದೇ ₹50 ಯಿಂದ ದುಡಿಮೆ ಪ್ರಾರಂಭಿಸುವ ನಾವು ಒಂದು ಹೊತ್ತಿನ ಊಟಕ್ಕೆ ₹50 ನೀಡುವಷ್ಟು ಸಮರ್ಥರಾಗಿಲ್ಲ. ಆದರೆ, ಇಂದಿರಾ ಕ್ಯಾಂಟೀನ್‌ಗಳಲ್ಲಿ ₹5 ನೀಡಿದರೇ, ನಾಲ್ಕು ಇಡ್ಲಿ ಸಿಗುತ್ತಿತ್ತು. ಇದೀಗ ಕ್ಯಾಂಟೀನ್‌ಗಳಲ್ಲಿ ಇಡ್ಲಿ ಸರಬರಾಜು ಕೂಡಾ ಮಾಡುತ್ತಿಲ್ಲ. ಬಿಜೆಪಿ ಸರ್ಕಾರ ರಾಜಕೀಯ ಮಾಡುವ ಮುಂಚೆ ಜನರ ಹಿತಕ್ಕಾಗಿ ಕೆಲಸ ಮಾಡಬೇಕಿದೆ” ಎಂದು ಆಟೋ ಚಾಲಕ ಮಂಜುನಾಥ್ ಈ ದಿನ.ಕಾಮ್‌ಗೆ ಹೇಳಿದರು.

ಈ ಸುದ್ದಿ ಓದಿದ್ದೀರಾ? 2023ರ ವಿಧಾನಸಭಾ ಚುನಾವಣೆ | ಮತದಾರರ ಓಲೈಕೆಗೆ ‘ಉಚಿತ’ಗಳ ಸುರಿಮಳೆ; ಇವು ಕೇವಲ ಭರವಸೆಗಳೇ?

ಕೂಲಿ ಕಾರ್ಮಿಕ ಸಂತೋಷ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ನಾವು ಕಟ್ಟಡ ಕಾರ್ಮಿಕರು ದಿನನಿತ್ಯ ಕಷ್ಟಪಟ್ಟು ದುಡಿಯುತ್ತೇವೆ. ಅದಕ್ಕೆ ತಕ್ಕನಾಗಿ ನಮಗೆ ರುಚಿ ಶುಚಿಯಾದ ಊಟ ಬೇಕು. ಹೊರಗಡೆ ಹೋಟೆಲ್‌ಗಳಲ್ಲಿ ತಿನ್ನುವಷ್ಟು ನಾವು ಸಬಲರಾಗಿಲ್ಲ. ಆದರೆ, ಇಂದಿರಾ ಕ್ಯಾಂಟೀನ್ ನಮ್ಮ ಪಾಲಿಗೆ ವರದಾನವಾಗಿದೆ. ಕಡಿಮೆ ದರದಲ್ಲಿ ಊಟ ನೀಡುತ್ತಿದೆ. ಸರ್ಕಾರ ತಾರತಮ್ಯ ಮಾಡದೇ ಇರುವ ಕ್ಯಾಂಟೀನ್ ನಡೆಸಿದರೇ ಜನರಿಗೆ ಸಹಕಾರಿ” ಎಂದು ತಿಳಿಸಿದರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X