ರಾಜ್ಯದ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿನೇ ದಿನೇ ರಸ್ತೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಕಳೆದ ಶನಿವಾರ ರಾಜ್ಯದಲ್ಲಿ ರಸ್ತೆ ಅಪಘಾತದಿಂದ 37 ಜನ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್ ಮಹಾ ಆಯುಕ್ತ ಅಲೋಕ್ ಕುಮಾರ್ ಅವರು ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಸಂಚಾರ ನಿಯಮಗಳನ್ನು ಪಾಲಿಸಿ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಶನಿವಾರ ಮುಂಜಾನೆ ಚಿತ್ರದುರ್ಗ ಬಳಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ 5 ಸಾವು ಸೇರಿದಂತೆ ರಾಜ್ಯದಲ್ಲಿ ಅಪಘಾತಗಳಿಂದ 37 ಮಂದಿ ಸಾವನ್ನಪ್ಪಿದ್ದಾರೆ. ಇದು ಕರಾಳ ಶನಿವಾರ. ಹೆಚ್ಚಿನ ಅಪಘಾತಗಳಲ್ಲಿ ಬೈಕ್ ಸವಾರರು ಸಾವನ್ನಪ್ಪುತ್ತಿದ್ದಾರೆ. ವಾಹನ ಚಾಲನೆ ಮಾಡಿ ಅನುಭವ ಇಲ್ಲದವರು ರಾತ್ರಿ ವೇಳೆ ವಾಹನ ಚಲಾಯಿಸಬೇಡಿ, ದ್ವಿಚಕ್ರ ವಾಹನ ಸವಾರರು ತಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಬಳಸಬೇಕು” ಎಂದು ಬರೆದುಕೊಂಡಿದ್ದಾರೆ.
ಎಡಿಜಿಪಿ ಅಲೋಕ್ ಕುಮಾರ್ ಅವರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆಯುತ್ತಿದ್ದ ಅಪಘಾತಗಳನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಇತ್ತೀಚೆಗೆ ಹೆದ್ದಾರಿಯಲ್ಲಿ ಅಪಘಾತಗಳು ಒಂದಕಿಗೆ ಬಂದು ತಲುಪಿವೆ ಎಂದು ಸಂತಸ ವ್ಯಕ್ತಪಡಿಸಿ ಪೊಲೀಸರಿಗೆ ಅಭಿನಂದನೆ ತಿಳಿಸಿದ್ದರು.