- ನೂತನ ವಿದ್ಯುತ್ ವಾಹನಗಳಲ್ಲಿ ಮಾಲಿನ್ಯ ರಹಿತವಾಗಿ ಬೆಂಗಳೂರಿನ ಜನರ ಪ್ರಯಾಣ
- ಸರ್ಕಾರದ ಫೇಮ್-2 ಯೋಜನೆಯಡಿಯಲ್ಲಿ ಜಿಸಿಸಿ ಆಧಾರದ ಮೇಲೆ ಕಾರ್ಯಾಚರಣೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 921 ಟಾಟಾ ಎಲೆಕ್ಟ್ರಿಕ್ ಬಸ್ಗಳನ್ನು ಸೇರ್ಪಡೆಗೊಳಿಸುತ್ತಿದ್ದು, ಬೆಂಗಳೂರಿನ ಸಾರ್ವಜನಿಕರು ಶೀಘ್ರದಲ್ಲೇ ಆರಾಮದಾಯಕ ಪರಿಸರ ಸ್ನೇಹಿ ಪ್ರಯಾಣ ಮಾಡಬಹುದು.
ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಪ್ರಥಮ ಪ್ರೊಟೊಟೈಪ್ ಬಸ್ಗೆ ಗುರುವಾರ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, “ಬಿಎಂಟಿಸಿಯ ನೂತನ ವಿದ್ಯುತ್ ವಾಹನಗಳಲ್ಲಿ ಮಾಲಿನ್ಯ ರಹಿತವಾಗಿ ಬೆಂಗಳೂರಿನ ಜನರು ಪ್ರಯಾಣಿಸಬಹುದು. ಸರ್ಕಾರ ಸಾರಿಗೆ ಸಂಸ್ಥೆಗಳಿಗೆ 4,000 ಹೊಸ ವಾಹನಗಳನ್ನು ಒದಗಿಸುವ ಮತ್ತು 13,000 ಸಿಬ್ಬಂದಿ ನೇಮಕಾತಿಗೆ ಅನುಮತಿ ಕೊಡುವ ಜೊತೆಗೆ ಬಜೆಟ್ನಲ್ಲಿ ₹500 ಕೋಟಿ ನಿಗಮಗಳಿಗೆ ಬಸ್ ಖರೀದಿಗಾಗಿ ವಿಸ್ತರಣೆ ಮಾಡಲಾಗುವುದು” ಎಂದರು.
“ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಘಟಕ ವ್ಯವಸ್ಥಾಪಕರುಗಳಿಗೆ ನೂತನ ವಾಹನಗಳನ್ನು ಒದಗಿಸಲಾಗಿದ್ದು, ಇದರಿಂದ ಅವರು ಬಸ್ ನಿಲ್ದಾಣಗಳು, ಮೋಟಾರು ವಾಹನ ಇಲಾಖೆ, ಅಪಘಾತ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದು. ಈ ನೂತನ 921 ಎಲೆಕ್ಟ್ರಿಕ್ ಬಸ್ಗಳನ್ನು ಆರ್ಥಿಕ ವರ್ಷದೊಳಗಾಗಿ ಹಂತ-ಹಂತವಾಗಿ ಸೇರ್ಪಡೆ ಮಾಡುವುದು” ಎಂದು ತಿಳಿಸಿದರು.
- ಬಿಎಂಟಿಸಿಯ ಈ ನೂತನ 921 ಟಾಟಾ ವಿದ್ಯುತ್ ವಾಹನಗಳು ಭಾರತ ಸರ್ಕಾರದ ಫೇಮ್-2 ಯೋಜನೆಯಡಿಯಲ್ಲಿ ಜಿಸಿಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡಲಿವೆ.
- ಈ ಬಸ್ಗಳು 12 ಮೀಟರ್ ಉದ್ದ, 400 ಎಮ್ ಎಮ್ ಎತ್ತರದ ಕೆಳ-ಮಹಡಿ ಎಲೆಕ್ಟ್ರಿಕ್ ಬಸ್ಗಳಾಗಿವೆ.
- ಈ ಬಸ್ 35 ಪ್ರಯಾಣಿಕರಿಗೆ ಆರಾಮದಾಯಕ ಆಸನ ಮತ್ತು ಕೆಳ-ಮಹಡಿ ಸಂರಚನೆಯೊಂದಿಗೆ ಸುಲಭ ಪ್ರವೇಶ ಮತ್ತು ಹೊರಹೋಗುವಿಕೆಯಂತಹ ವೈಶಿಷ್ಟ್ಯ ಹೊಂದಿದೆ.
- ಬಿಎಂಟಿಸಿಯ 1500 ಎಲೆಕ್ಟ್ರಿಕ್ ಬಸ್ಗಳನ್ನು ತನ್ನ ವಾಹನ ಬಲಕ್ಕೆ ಸೇರ್ಪಡೆಗೊಳಿಸಲು ಗ್ರ್ಯಾಂಡ್ ಚಾಲೆಂಜ್ನಲ್ಲಿ ಭಾಗವಹಿಸಿದೆ.
- ಜಿಸಿಸಿ ಆಧಾರದಲ್ಲಿ ಈ ಬಸ್ಗಳ ಪ್ರತಿ ಕಿ.ಮೀ ಕಾರ್ಯಾಚರಣೆಯ ದರ ₹41.01 ಮೊತ್ತವಾಗಿದೆ.
- ಭಾರಿ ಕೈಗಾರಿಕ ಸಚಿವಾಲಯ, ಕೇಂದ್ರ ಸರ್ಕಾರ ವತಿಯಿಂದ 921 ಟಾಟಾ ಎಲೆಕ್ಟ್ರಿಕ್ ಬಸ್ಗಳಿಗೆ ಸಹಾಯಧನ ಒದಗಿಸಲಾಗಿದೆ.
- ಈ ಸಹಾಯಧನದ ಅನ್ವಯ ಬಿಎಂಟಿಸಿ ಒಟ್ಟು 921 ಎಲೆಕ್ಟ್ರಿಕ್ ಬಸ್ಗಳನ್ನು ಜಿಸಿಸಿ ಮಾಡೆಲ್ ಆಧಾರದ ಮೇಲೆ ಕಾರ್ಯಾಚರಣೆ ಮಾಡಬಹುದಾಗಿದೆ.
- ಪ್ರತಿ ಬಸ್ ಅನ್ನು 45 ನಿಮಿಷ ಚಾರ್ಜಿಂಗ್ ಮಾಡಲಾಗುತ್ತದೆ.
- ಶಾಂತಿನಗರ, ಜಯನಗರ, ಹೆಣ್ಣೂರು, ದೀಪಾಂಜಲಿನಗರ, ರಾಜರಾಜೇಶ್ವರಿನಗರ, ಪೀಣ್ಯ 2ನೇ ಹಂತ, ಜಿಗಣಿ, ಕೆ.ಆರ್.ಪುರಂ, ಸೀಗೇಹಳ್ಳಿ, ಹೊಸಕೋಟೆ ಸೇರಿದಂತೆ 10 ಘಟಕಗಳಲ್ಲಿ ಈ ಎಲೆಕ್ಟ್ರಿಕ್ ಬಸ್ಗಳು ಕಾರ್ಯಾಚರಣೆ ನಡೆಸಲಿವೆ.
- ಕೆಂಪೇಗೌಡ ಬಸ್ ನಿಲ್ದಾಣ, ಸುಜಾತ ಟಾಕೀಸ್, ಇಂಡಸ್ಟ್ರಿಯಲ್ ಟೌನ್ ರಾಜಾಜಿನಗರ, ಹಾವನೂರು ವೃತ್ತ, ಮೋದಿ ಆಸ್ಪತ್ರೆ, ಹರಿಶ್ಚಂದ್ರ ಘಾಟ್, ಸೆಂಟ್ರಲ್, ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಕಾರ್ಯಚರಣೆ ನಡೆಸಲಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ವಾವಲಂಬಿ ಜೀವನ ಸಾಗಿಸಲು ಅರ್ಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ
ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ ಸತ್ಯವತಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.